ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಜೂ. 1: ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆಯ ಹಾನಿಗಳನ್ನು ತಡೆಗಟ್ಟಲು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಗುರುವಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣೆ, ಕಂದಾಯ, ಕಂದಾಯೇತರ ವಿಷಯಗಳು, ಮಳೆಯಿಂದಾಗಬಹುದಾದ ಹಾನಿ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಬಾಗೇಪಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ನಂತರ ಜಿಲ್ಲಾಧಿಕಾರಿಗಳು ಪರಗೋಡು ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಾಲೆಯಲ್ಲಿನ ಕಲಿಕಾ ಸೌಲತ್ತುಗಳು ಮತ್ತು ಸಮಸ್ಯೆಗಳನ್ನು ಆಲಿಸಿದರು. ಮಧ್ಯಾಹ್ನದ ವೇಳೆ ಮಕ್ಕಳಿಗೆ ನೀಡುವ ಬಿಸಿ ಊಟದ ಗುಣಮಟ್ಟ ಹಾಗೂ ಅಲ್ಲಿನ ಸ್ವಚ್ಚತೆಯ ಬಗ್ಗೆ ಪರಿಶೀಲಿಸಿದರು. ಶಾಲೆಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು. ಈ ವೇಳೆ ಮಕ್ಕಳ ಹಾಜರಾತಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ತಹಶೀಲ್ದಾರ್ ಸಿ. ರಾಮಲಕ್ಷ್ಮಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.