ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಜೂನ್.22: ಸ್ವಚ್ಚ ಮತ್ತು ಹಸಿರು ಚಿಕ್ಕಬಳ್ಳಾಪುರ ದೃಷ್ಟಿಕೋನದ ಪರಿಕಲ್ಪನೆಯೊಂದಿಗೆ ಜಿಲ್ಲೆಯಲ್ಲಿ ಅಭಿವೃದ್ಧಿಗೊಳಿಸಲು ವರ್ತಕರು ಮತ್ತು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಗುರುವಾರ ಜಿಲ್ಲೆಯ ಗೌರಿಬಿದನೂರು ನಗರಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿ ಪರ್ಯಾಯವಾಗಿ ಬಟ್ಟೆ ಚೀಲಗಳನ್ನು ಬಳಸಲು ಸೂಚನೆ ನೀಡಿದರು.
ಕ್ಲೀನ್ ಅಂಡ್ ಗ್ರೀನ್ ಚಿಕ್ಕಬಳ್ಳಾಪುರ ಪರಿಕಲ್ಪನೆಯನ್ನು ಸಕಾರಗೊಳಿಸಲು ಪ್ರಮುಖವಾಗಿ ತೊಡಕಾಗಿರುವುದು ಪ್ಲಾಸ್ಟಿಕ್ ಬಳಕೆ. ಈ ಹಾವಳಿಯನ್ನು ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳು ಆರಂಭದಲ್ಲಿ ಜನರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲು ತಿಳಿಸಲಾಗಿದೆ. ಅಂತಹ ಪರಿಸ್ಥಿತಿಗೆ ಯಾವುದೇ ವರ್ತಕರು ಮತ್ತು ಸಾರ್ವಜನಿಕರು ಅವಕಾಶ ಕೊಡುವುದಿಲ್ಲ ಎಂಬ ನಂಬಿಕೆಯಲ್ಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗೌರಿಬಿದನೂರು ತಹಶೀಲ್ದಾರ್ ಮಹೇಶ್ ಪತ್ರಿ, ಸ್ಥಳೀಯ ವರ್ತಕರು, ಸಾರ್ವಜನಿಕರು ಉಪಸ್ಥಿತರಿದ್ದರು.
ಟೊಮೋಟೋ ತೋಟಕ್ಕೆ ಭೇಟಿ
ಗೌರಿಬಿದನೂರು ತಾಲ್ಲೂಕಿನ ಹಿರೀಬಿದನೂರು ಗ್ರಾಮದ ರೈತರಾದ ಚೌಡಪ್ಪ ಎಂಬುವರ ಟೋಮೋಟೋ ತೋಟಕ್ಕೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಭೇಟಿ ನೀಡಿ, ಟೋಮೋಟೋ ಬೆಳೆಗೆ ಬಿಳಿನೊಣದ ಹಾವಳಿಯಿಂದ ಎಲೆ ಮುದುಡು ರೋಗ ಹರಡಿರುವ ಕುರಿತು ರೈತರಿಂದ ಸಂಪೂರ್ಣ ಮಾಹಿತಿ ಪಡೆದರು.
ರೈತರು ಕಳೆದ ವರ್ಷ ಸುಮಾರು 8 ರಿಂದ 10 ಕಟಾವು ಮಾಡಿದ್ದರು., ಈ ವರ್ಷದಲ್ಲಿ ಅಧಿಕ ಉಷ್ಣಾಂಶ ಹಾಗೂ ಆರ್ದ್ರತೆಯಿಂದ ಬಿಳಿನೊಣ ಹಾವಳಿ ಹೆಚ್ಚಾಗಿರುವ ಕಾರಣ, 2 ರಿಂದ 3 ಕಟಾವಿನ ನಂತರ ಬೆಳೆ ಮುಗಿಯುತ್ತದೆ. ಆದ್ದರಿಂದ ಈ ರೋಗವನ್ನು ನಿಯಂತ್ರಿಸಲು 5 ಅಡಿ ಎತ್ತರದ ನೆರಳು ಪರದೆಯನ್ನು ಅಳವಡಿಸಿರುವುದು ಹಾಗೂ ನಿಯಮಿತ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ರೋಗ ಹಾಗೂ ಕೀಟಗಳನ್ನು ಸ್ವಲ್ಪ ಮಟ್ಟಿಗೆ ಹತೋಟಿ ತರಲಾಯಿತು ಎಂದು ರೈತರು ತಿಳಿಸಿದರು.
ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮಾತನಾಡಿ, ಟೋಮೋಟೋ ತೋಟಗಳಿಗೆ ಭೇಟಿ ನೀಡಿ ಬಿಳಿನೊಣ ರೋಗದ ಸಮಗ್ರ ಹತೋಟಿ ಕ್ರಮಗಳ ಕುರಿತು ರೈತ ಬಾಂಧವರಿಗೆ ಮಾಹಿತಿಯನ್ನು ನೀಡಿ ಅರಿವು ಮೂಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ತೋಟಗಾರಿಕೆ ಉಪನಿರ್ದೇಶಕಿ ಗಾಯತ್ರಿ, ತಹಶೀಲ್ದಾರ್ ಮಹೇಶ್ ಪತ್ರಿ ಸೇರಿದಂತೆ ತೋಟಗಾರಿಕೆ ಇಲಾಖೆಯ ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.