ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 14 : ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಕೆರೆ ಹೂಳೆತ್ತುವುದು ಮತ್ತು ಅಭಿವೃದ್ಧಿ, ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಹಕ್ಕುಪತ್ರ ವಿತರಣೆ, ಸ್ಮಶಾನ ಅಭಿವೃದ್ಧಿ, ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಂದಾಯ ಇಲಾಖೆಗಳ ಜಂಟಿಯಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇವೆ ಎಂದು ತಹಶಿಲ್ದಾರ್ ಶಿವರಾಜ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮಪಂಚಾಯತಿ ವಾರು ಕೆರಗಳ ವಿವರ, ಸ್ಮಶಾನ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಹಾಗೂ ಪ್ರತಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಹಕ್ಕುಪತ್ರ ನೀಡಲು ಆಗಬೇಕಿರುವ ಕೆಲಸಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇವೆ. ಸಭೆಗೆ ತಾಲ್ಲೂಕಿನ ಎಲ್ಲಾ ಪಂಚಾಯತಿ ಅಧಿಕಾರಿಗಳು ಹಾಜರಿದ್ದು ಎಲ್ಲರಿಗೂ ನಿರ್ದೇಶನ ನೀಡಲಾಗಿದೆ 3 ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದರು.
ತಾಲ್ಲೂಕಿನ ಚಪ್ಪರಕಲ್ ಬಳಿ ಇರುವ ಖಾಸಗಿ ವಿಶ್ವವಿದ್ಯಾಲಯ ಜಾಗ ಒತ್ತುವರಿ ಮಾಡಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿ, ಒತ್ತುವರಿಯಾಗಿಲ್ಲ, ಜಮೀನು ಮಧ್ಯೆ ನಕಾಶೆ ರಸ್ತೆ ಇದ್ದು, ನಕಾಶೆ ರಸ್ತೆಯನ್ನು ತೆರವುಗೊಳಿಸಲು ಇಲಾಖೆಯಿಂದ ಸೆಕ್ಷನ್ 104 ಅಡಿಯಲ್ಲಿ ನೊಟೀಸ್ ನೀಡಿದ್ದು, ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಲಯದಿಂದ ಅದೇಶ ಬಂದ ನಂತರ ಅದನ್ನು ತೆರವುಗೊಳಿಸಲಾಗುವುದು ಎಂದರು.
ಇದೆ ವೇಳೆ ಇಓ ಶ್ರೀನಾಥ್ಗೌಡ.ಸಿ.ಎಸ್, ಪಂಚಾಯತಿ ಅಭಿವೃದ್ಧಿ ಆಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.