ಸುದ್ದಿಮೂಲ ವಾರ್ತೆ
ತಿಪಟೂರು, ಆ. 13 : ಗೃಹ ಸಚಿವ ಜಿ.ಪರಮೇಶ್ವರ್ ತಾಲೂಕಿನ ಮುಖಂಡರೊಂದಿಗೆ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ತಿಪಟೂರು ಕೆಡಿಪಿ, ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ್ ಸಭೆಯ ನಂತರ ನಿವೃತ್ತ ಎಸಿಪಿ ಲೋಕೇಶ್ವರ್ ಮನೆಗೆ ಆಗಮಿಸಿ ಮಾತುಕತೆ ನಡೆಸಿದರು.
ನಗರದಲ್ಲಿ ಸಿಗ್ನಲ್ ಲೈಟ್, ಹೈ ಮಾಸ್ಕ್ ದ್ವೀಪಗಳನ್ನು ಅಳವಡಿಸಿ ನಿಷ್ಕ್ರಿಯವಾಗುವ ಹಂತಕ್ಕೆ ಬಂದರೂ ಉದ್ಘಾಟನೆಯಾಗಿಲ್ಲ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಚಿವರ ಗಮನಕ್ಕೆ ತಂದರು.
ಪ್ರಸ್ತುತ ಕೊಬ್ಬರಿ ಬೆಲೆ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಶಾಶ್ವತ ಪರಿಹಾರವನ್ನು ಒದಗಿಸಬೇಕು. ಪೊಲೀಸ್ ಇಲಾಖೆಯಲ್ಲಿ ಅವೈಜ್ಞಾನಿಕ ವರ್ಗಾವಣೆಗಳು ನಡೆಯುತ್ತಿವೆ. ಇದನ್ನು ಕೂಡಲೇ ನಿಲ್ಲಿಸುವಂತೆ ಮನವಿ ಮಾಡಿದರು.
ಚುನಾವಣಾ ನಂತರ ಪಕ್ಷ ಸಂಘಟನೆಯು ಕುಂಟಿತವಾಗಿದ್ದು, ಪಕ್ಷ ಸಂಘಟನೆಗಾಗಿ ಲೋಕೇಶ್ವರ್ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಆಗ್ರಹಿಸಿದರು.
ಸಭೆಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಗಣೇಶ್, ಭಾರತಿ ಮಂಜುನಾಥ್, ಯಮುನಾ ಧರಣೀಶ್, ಆಸಿಫಾ ಬಾನು, ಮಾಜಿ ಎಪಿಎಂಸಿ ಸದಸ್ಯ ಬಸವರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.