ನವದೆಹಲಿ, ಆ.9: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಬುಧವಾರ ಸಂಸತ್ತಿನಲ್ಲಿ ಭೇಟಿ ಮಾಡಿದರು. ಈ ವೇಳೆ ಅವರು ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷಗಳ ನಾಯಕರನ್ನು ನೇಮಿಸುವಂತೆ ಮನವಿ ಮಾಡಿದರು.
ಕಳೆದ ಭಾನುವಾರದಿಂದ ನವದೆಹಲಿಯಲ್ಲಿಯೇ ಬೀಡುಬಿಟ್ಟಿರುವ ಬಸವರಾಜ ಬೊಮ್ಮಾಯಿ ಅವರಿಗೆ ಮೂರು ದಿನಗಳ ಬಳಿಕ ಅಮಿತ್ ಶಾ ಮತ್ತು ನಾಲ್ಕು ದಿನಗಳ ಬಳಿಕ ಜೆ.ಪಿ. ನಡ್ಡಾ ಭೇಟಿಯ ಅವಕಾಶ ಸಿಕ್ಕಿದೆ.
ರಾಜ್ಯದಲ್ಲಿ ವಿಪಕ್ಷ ನಾಯಕರ ಆಯ್ಕೆಯಾಗದೆ ಪಕ್ಷಕ್ಕೆ ಮುಜುಗರವಾಗುತ್ತಿದೆ ಎಂಬ ವಿಷಯವನ್ನು ಬೊಮ್ಮಾಯಿ ನಡ್ಡಾ ಅವರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ಲೋಕಸಭಾ ಚನಾವಣೆ ದೃಷ್ಟಿಯಿಂದ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವಂತಹ ಹೊಸ ನಾಯಕನ ಆಯ್ಕೆಯಾಗಬೇಕು ಎಂಬುದನ್ನು ಸಹ ಬೊಮ್ಮಾಯಿ ಅವರು ನಡ್ಡಾ ಮುಂದೆ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಡ್ಡಾ, ಸಂಸತ್ ಅಧಿವೇಶನದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು ಎನ್ನಲಾಗಿದೆ. ಅಲ್ಲದೆ, 2024ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿಯ ಕಾರ್ಯತಂತ್ರ ಏನು ಎಂದು ನಡ್ಡಾ ಮತ್ತು ಬೊಮ್ಮಾಯಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸುತ್ತಿರುವ ಗ್ಯಾರಂಟಿ ಯೋಜನೆಗಳು ಮತ್ತು ಅವುಗಳಿಗೆ ಜನರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಸಹ ನಡ್ಡಾ ಅವರು ಬೊಮ್ಮಾಯಿಯವರಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ, 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಬಿಜೆಪಿಯ ತಂತ್ರವೇನು ಎಂಬುದನ್ನೂ ಸಹ ಚರ್ಚಿಸಲಾಯಿತು ಎನ್ನಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ವೇಳೆಯೂ ಸಹ ಬೊಮ್ಮಾಯಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದರು. ನಾನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇನೆ ಮತ್ತು ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ಬೊಮ್ಮಾಯಿ ಮಂಗಳವಾರ ಟ್ವೀಟ್ ಮಾಡಿದ್ದರು.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಶೀಘ್ರವಾಗಿ ನೇಮಕ ಮಾಡುವಂತೆ ಮಾಜಿ ಮುಖ್ಯಮಂತ್ರಿ ಶಾ ಅವರಿಗೆ ಮನವಿ ಮಾಡಿದ್ದಾರೆ.