ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.3: ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.28ರಂದು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಹೇಳಿದರು.
ತಳ ಸಮುದಾಯಗಳ ಯಾವುದೇ ಜಯಂತಿ ಮತ್ತು ಜಾಗೃತಿ ಸಮಾವೇಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಎಸ್. ಟಿ-ಎಸ್. ಸಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಆಯಾ ಸಮುದಾಯಗಳ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದು ಅವರು ಮಂಗಳವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಇದಕ್ಕೂ ಮುನ್ನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ 2023 ನೇ ಸಾಲಿನಲ್ಲಿ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಕುರಿತು ನಡೆದ ಪೂರ್ವಭಾವಿ ಸಭೆಯನ್ನು ಸಚಿವ ಬಿ. ನಾಗೇಂದ್ರರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಪರಿಶಿಷ್ಟ ಪಂಗಡದ ಸಮಾಜದ ಹಿರಿಯ ಮುಖಂಡರನ್ನು ವಿಶೇಷವಾಗಿ ಆಹ್ವಾನಿಸಿ ಸಲಹೆ – ಸೂಚನೆಗಳನ್ನು ಪಡೆಯಲಾಯಿತು.
ಶ್ರೀ ಮಹರ್ಷಿ ವಾಲ್ಮೀಕಿರವರ ಭಾವಚಿತ್ರವನ್ನು ಬಸವೇಶ್ವರ ವೃತ್ತದಿಂದ ತಪೋವನದವರೆಗೆ ಬೃಹತ್ ಕಲಾತಂಡಗಳೊಂದಿಗೆ ಸಾರೋಟಿಯಲ್ಲಿ ಮೆರವಣಿಗೆ ಮೂಲಕ ಕರೆತಂದು, ತಪೋವನದಲ್ಲಿ ಪುಷ್ಪನಮನವನ್ನು ಸಲ್ಲಿಸಿ ಅಲ್ಲಿಂದ ಬಸವಗುಡಿಯ ಶ್ರೀ ಶಿವಭಕ್ತ ಬೇಡರ ಕಣ್ಣಪ್ಪ ದೇವಸ್ಥಾದಿಂದ ವಿಧಾನಸೌಧದವರೆಗೆ ವಾಲ್ಮೀಕಿ ಜ್ಯೋತಿಯನ್ನು ಮೆರವಣಿಗೆ ಮೂಲಕ ಕರೆತಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.
ಇನ್ನು ವಿಶೇಷವಾಗಿ 2023ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಕಂದಾಯ ವಿಭಾಗ ಹಾಗೂ ಬೆಂಗಳೂರು ಕೇಂದ್ರಸ್ಥಾನದಿಂದ ತಲಾ ಒಬ್ಬರಂತೆ 5 ಜನ ಗಣ್ಯರಿಗೆ ರಾಜ್ಯ ಸರ್ಕಾರದ ವತಿಯಿಂದ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ.
ಈ ಸಭೆಯಲ್ಲಿ ಸಮಾಜದ ಮುಖಂಡರು ಸಚಿವ ಬಿ. ನಾಗೇಂದ್ರರವರಿಗೆ ಪ್ರಮುಖವಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, ಪ್ರತಿ ಹೋಬಳಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತವಾದ ವಾಲ್ಮೀಕಿ ಭವನ ನಿರ್ಮಿಸಬೇಕು, ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿರವರ ಹೆಸರು ನಾಮಕರಣ ಮಾಡಬೇಕು, ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಯ ಒಂದು ನಿಲ್ದಾಣಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಮೆಟ್ರೋ ನಿಲ್ದಾಣ ಎಂದು ಘೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಬಿ. ನಾಗೇಂದ್ರ, ರಾಜ್ಯ ಸರ್ಕಾರದ ವತಿಯಿಂದ ಅ.28 ರಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು, ಇನ್ನು ಜಿಲ್ಲಾ ಮತ್ತು ಮತ್ತು ತಾಲ್ಲೂಕು ಮಟ್ಟದಲ್ಲಿ ಕೂಡ ಆಚರಣೆ ಮಾಡಲು ಈ ಹಿಂದೆ ನೀಡಲಾಗುತ್ತಿದ್ದ ಜಿಲ್ಲಾ ಮಟ್ಟಕ್ಕೆ ಒಂದು ಲಕ್ಷದಿಂದ ಹೆಚ್ಚಿಗೆ ಮಾಡಿ ಒಂದು ಲಕ್ಷದ ಐವತ್ತು ಸಾವಿರ ಮತ್ತು ತಾಲ್ಲೂಕು ಮಟ್ಟದ ಜಯಂತಿಗೆ ಇಪ್ಪತ್ತೈದು ಸಾವಿರದಿಂದ 35 ಸಾವಿರಕ್ಕೆ ಹೆಚ್ಚಿಗೆ ಮಾಡಲಾಗಿದೆ. ಯಾವುದೇ ಸಮಾಜದ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಅಂದರೆ ಆಯಾ ಸಮಾಜದವರ ಸಹಕಾರ ಅಗತ್ಯ ಎಂದು ತಿಳಿಸಿದರು.
ಈ ಸಭೆಯಲ್ಲಿ ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ನಾಯಕ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಕಲ್ಲೇಶ್, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮನಾಭ, ಕರ್ನಾಟಕ ರಾಜ್ಯ ಬುಡಕಟ್ಟು ಜನಾಂಗದ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀನಿವಾಸ್ ರವರು ಮತ್ತು ಪರಿಶಿಷ್ಟ ಪಂಗಡದ
ಸಮಾಜ ಹಿರಿಯ ಮುಖಂಡರು ಉಪಸ್ಥಿತರಿದ್ದರು.