ಸುದ್ದಿಮೂಲ ವಾರ್ತೆ ,
ಬೆಂಗಳೂರು ಏ೦೬ : ಇಂದು ಪ್ರಕಟವಾಗಿರುವ 166 ಕ್ಷೇತ್ರಗಳ ಪಟ್ಟಿಯಲ್ಲಿ 10ಕ್ಕೂ ಹೆಚ್ಚು ಮಂದಿ ಪಕ್ಷಾಂತರಿಗಳು ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ನಲ್ಲಿ ವಲಸಿಗರ ಪಾರುಪತ್ಯ ಹೆಚ್ಚಾಗಿದೆ.
ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಬೇಕು ಎಂಬ ಕಾರಣಕ್ಕೆ ವಾರದ ಹಿಂದೆ ಪಕ್ಷ ಸೇರ್ಪಡೆಯಾದವರಿಗೂ ಕಾಂಗ್ರೆಸ್ ಮಣೆ ಹಾಕಿದೆ. ಇನ್ನೂ ಅಚ್ಚರಿ ಎಂದರೆ ಪಕ್ಷ ಸೇರದೆ ಇರುವ ಜೆಡಿಎಸ್ ನಾಯಕರಿಗೂ ಟಿಕೆಟ್ ನೀಡಲು ತಯಾರಿ ನಡೆಸಿದೆ.
ಬಿಜೆಪಿ ಆಡಳಿತದಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರಿದ್ದ ಬಾಬುರಾವ್ ಚಿಂಚಣಸೂರ್ ಗುರುಮಿಠ್ಕಲ್ನಿಂದ, ಪುಟ್ಟಣ್ಣ ರಾಜಾಜಿನಗರದಿಂದ, ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ವಲಸೆ ಬಂದ ಎನ್.ವೈ.ಗೋಪಾಲಕೃಷ್ಣ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ದಿಸಲಿದ್ದಾರೆ.
ಒಂದು ವರ್ಷದಿಂದೀಚೆಗೆ ಪಕ್ಷ ಸೇರಿದ ಜೆಡಿಎಸ್ನ ಮಧುಬಂಗಾರಪ್ಪ ಸೊರಬದಿಂದ, ಬೇಮಲ್ ಕಾಂತರಾಜು ತುರುವೇಕೆರೆ, ಬಿಜೆಪಿಯಿಂದ ಬಂದ ಕಿರಣ್ಕುಮಾರ್ ಚಿಕ್ಕನಾಯಕನಹಳ್ಳಿ, ಯು.ಬಿ.ಬಣಕಾರ್ ಹಿರೆಕೆರೂರು, ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸಹ ಸದಸ್ಯರಾಗಿದ್ದ ಶರತ್ ಬಚ್ಚೆಗೌಡ ಹೊಸಕೋಟೆಯಿಂದ ಅವಕಾಶ ಪಡೆದಿದ್ದಾರೆ. ಇವರ ತಂದೆ ಬಿ.ಎನ್.ಬಚ್ಚೇಗೌಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದಾರೆ.
ಇನ್ನೂ ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ದಿಸಿದ್ದ ಡಾ.ಎಂ.ಸಿ.ಸುಧಾಕರ್ ಚಿಂತಾಮಣಿಯಿಂದ, ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದ ಹೆಚ್.ನಾಗೇಶ್ ಮಹದೇವಪುರದಿಂದ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಬಾಕಿ ಇರುವ 58 ಕ್ಷೇತ್ರಗಳಿಗೆ ಹುರಿಯಾಳುಗಳ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು ಮುಂದುವರೆದಿದೆ. ರಾಜ್ಯದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಎರಡನೇ ಜಿಲ್ಲೆಯ ಸ್ಥಾನ ಪಡೆದಿರುವ ಗಡಿನಾಡು ಬೆಳಗಾವಿಯಲ್ಲಿ 18 ಕ್ಷೇತ್ರಗಳ ಪೈಕಿ ಆಪರೇಷನ್ ಕಮಲದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅಲ್ಲಿ ಟಿಕೆಟ್ಗಾಗಿ ಪರದಾಡುತ್ತಿರುವ ಮಹೇಶ್ ಕುಮಟಳ್ಳಿ ಅವರ ಆಥಣಿ, ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಅರಭಾವಿ, ಉಳಿದಂತೆ ರಾಯಭಾಗ ಮೀಸಲು, ಬೆಳಗಾವಿ ಉತ್ತರ ಮತ್ತು ದಕ್ಷಿಣ ಸೇರಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಹಗ್ಗಜಗ್ಗಾಟ ನಡೆಯುತ್ತಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಆರಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವೆ ಉಮಾಶ್ರೀ ಅವರು ತೆರದಾಳಕ್ಕೆ ಇನ್ನೂ ಹೆಸರನ್ನು ಅಂತಿಮಗೊಳಿಸಿಲ್ಲ.
ಬಿಜಾಪುರ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ವಿಧಾನ ಪರಿಷತ್ನ ಮಾಜಿ ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್.ಪಾಟೀಲ್ ಆಕಾಂಕ್ಷಿಯಾಗಿರುವ ದೇವರಹಿಪ್ಪರಗಿ ಮತ್ತು ಸಿಂಧಗಿ ಕ್ಷೇತ್ರ ಹೊರತು ಪಡಿಸಿ ಉಳಿದ ಆರಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯ ಒಂಬತ್ತು ಕ್ಷೇತ್ರಗಳಲ್ಲಿ ಎಂಟಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿದೆ, ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರವನ್ನು ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆ.
ಬೀದರ್ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಭುಚಹ್ವಾಣ್ ಪ್ರತಿನಿಸುವ ಔರಾದ್ ಹೊರತು ಪಡಿಸಿ ಉಳಿದ ಐದು ಕ್ಷೇತ್ರಗಳಿಗೂ ಹುರಿಯಾಳುಗಳು ತಯಾರಾಗಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ನ ಹಾಲಿ ಶಾಸಕರಿರುವ ಲಿಂಗಸೂರಿಗೂ ಅಭ್ಯರ್ಥಿ ಘೋಷಣೆ ಮಾಡಲು ಕಾಂಗ್ರೆಸ್ ಮೀನಾಮೇಶ ಎಣಿಸುತ್ತಿದೆ. ಒಟ್ಟು ಒಟ್ಟು ಏಳು ಕ್ಷೇತ್ರಗಳಲ್ಲಿ ಎರಡಕ್ಕೆ ಮಾತ್ರ ಅಭ್ಯರ್ಥಿಗಳ ಘೋಷಣೆಯಾಗಿದೆ. ಬಾಕಿ ಉಳಿದಂತೆ ರಾಯಚೂರು ನಗರ, ಮಾನ್ವಿ, ದೇವದುರ್ಗ, ಲಿಂಗಸೂರು, ಸಿಂಧನೂರು ಕ್ಷೇತ್ರಗಳಿಗೆ ಹುರಿಯಾಳುಗಳ ಆಯ್ಕೆ ಕುರಿತು ದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ. ಈ ಜಿಲ್ಲೆ ಕಾಂಗ್ರೆಸ್ ನಾಯಕರಿಗೆ ಹೆಚ್ಚು ತಲೆ ನೋವು ಎಂದು ಭಾವಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಸುವ ಹಾವೇರಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಬೊಮ್ಮಾಯಿ ಅವರ ಶಿಗ್ಗಾವಿ ಕ್ಷೇತ್ರ ಮಾತ್ರ ಬಾಕಿ ಉಳಿದಿದೆ.