ಸುದ್ದಿಮೂಲ ವಾರ್ತೆ
ತುಮಕೂರು,ಮಾ.24: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ 2023ರ ವಿಧಾನಸಭಾ ಚುನಾವಣೆಗೆ ಪೂರಕವಾಗಿ ಸ್ಲಂ ಜನರ ಪ್ರಣಾಳಿಕೆಯನ್ನು ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು. ತುಮಕೂರಿನ ಪತ್ರಿಕಾ ಭವನದಲ್ಲಿ ಹಿರಿಯ ಚಿಂತಕರಾದ ಕೆ.ದೊರೈರಾಜ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಇಂದು ರಾಜಕೀಯ ಪಕ್ಷಗಳು ಸ್ಲಂಗಳಿಗೆ ರ್ಯಾಲಿ ಮಾಡಲು ಜನರನ್ನು ಕರೆದೊಯ್ಯುತ್ತಿದೆ, ಚುನಾವಣಾ ವ್ಯವಸ್ಥೆಯನ್ನು ಆಸೆ ಆಮಿಷಗಳಿಂದ ಸೆಳೆದು ಬಿಜೆಪಿಯ ಜನಸಂಕಲ್ಪ ಯಾತ್ರೆ, ಕಾಂಗ್ರೇಸ್ನ ಪ್ರಜಾಧನಿ ಯಾತ್ರೆ ಜೆಡಿಎಸ್ನ ಪಂಚರತ್ನ ಯಾತ್ರೆ ಸ್ಲಂ ಜನರ ಮತ್ತು ಬಡವರ ಸಮಸ್ಯೆಗಳನ್ನು ಚರ್ಚೆ ಮಾಡದೇ ಹಣ, ಬಾಡೂಟ, ದೇವರ ಮೇಲೆ ಪ್ರಮಾಣ, ಕಿಟ್ಗಳ ಹಂಚಿಕೆ ರಾಷ್ಟ್ರೀಯ ನಾಯಕರಿಗೆ ಜನ ತೋರಿಸಲು ಸ್ಲಂ ಜನರನ್ನು ದಿನ ಗೂಲಿ ಲೆಕ್ಕದಲ್ಲಿ ಸೇರಿಸುತ್ತಿರುವುದು ಪ್ರಜಾತಂತ್ರಕ್ಕೆ ಬಗೆದ ಅಪಮಾನವಾಗಿದೆ ಎಂದು ಹೇಳಿದರು. ಹಾಗಾಗಿ ಸ್ಲಂ ಜನರನ್ನು ರಾಜಕೀಯವಾಗಿ ಜಾಗೃತಿಗೊಳಿಸಲು ಸ್ಲಂ ಜನಾಂದೋಲನ ಕರ್ನಾಟಕ ಕೊಳಗೇರಿ ಜನರ ಜಲ್ವಂತ ಸಮಸ್ಯೆಗಳ ಮೇಲೆ ಪ್ರಣಾಳಿಕೆಯನ್ನು ಹೊರತಂದಿದ್ದು ಈ ಅಂಶಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕು, ಅದೇ ರೀತಿ ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳನ್ನು ನಮಗೆ ಘನತೆಯ ವಸತಿ, ನಗರ ಉದ್ಯೋಗ ಖಾತ್ರಿ, ಮತ್ತು ಬಡತನ ಮುಕ್ತಕ್ಕಾಗಿ ನಿಮ್ಮ ಪಕ್ಷದ ನಿಲುವೇನು,? ಎನ್ನುವುದನ್ನು ಪ್ರಶ್ನಿಸಿ ಮತ ಚಲಾಯಿಸಬೇಕು, ಮತವೇ ನಮ್ಮ ವಿಮೋಚನೆಯ ಅಸ್ತ್ರವಾಗಿದೆ ಎಂದರು. ನಂತರ ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ ಮಾತನಾಡಿ ರಾಜ್ಯದ 18 ಜಿಲ್ಲೆಗಳ ಒಂದು ಸಾವಿರಕ್ಕೂ ಮೇಲ್ಪಟ್ಟ ಕೊಳಚೆ ಪ್ರದೇಶಗಳಲ್ಲಿ ಈ ಕೆಳಕಂಡ 12 ಸ್ಲಂ ಜನರ ಪ್ರಣಾಳಿಕೆ ಮೇಲೆ ರಾಜಕೀಯ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈಗಾಗಲೇ ಕಾಂಗ್ರೇಸ್, ಜೆಡಿಎಸ್ ಮತ್ತು ಆಮ್ಆದ್ಮಿ ಪಕ್ಷಗಳ ಪ್ರಣಾಳಿಕಾ ಸಮಿತಿಗೆ ನಮ್ಮ ಜನರ ಆಗ್ರಹಗಳನ್ನು ನೀಡಿ ಸಮಾಲೋಚನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅಂಶಗಳ ಮೇಲೆ ಬದ್ದತೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕರೆ ನೀಡಲಾಗುವುದು ಎಂದರು. ಸ್ಲಂ ಜನರ ಪ್ರಣಾಳಿಕೆಯ ಅಂಶಗಳು: * ಕೊಳಗೇರಿಗಳ ಮತ್ತು ಸ್ಲಂ ನಿವಾಸಿಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು. * ಸ್ಲಂ ಜನರ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕು. * ಸ್ಲಂ ನಿವಾಸಿಗಳಿಗೆ ನಗರ ಉದ್ಯೋಗ ಖಾತ್ರಿ ಜಾರಿ ಮಾಡಬೇಕು. * ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆ ಜಾರಿಯಾಗಬೇಕು. * ರಾಜ್ಯದ 3.36 ಲಕ್ಷ ಸ್ಲಂ ಕುಟುಂಬಗಳಿಗೆ ಹಕ್ಕುಪತ್ರವನ್ನು ಕ್ರಯ ಮಾಡುವ ಮೂಲಕ ಭೂ ಮಾಲೀಕತ್ವ ನೀಡಬೇಕು. * ಸ್ಲಂ ಜನರಿಗೆ ಉಚಿತವಾಗಿ ಮನೆ ನಿರ್ಮಾಣ, ಸಬ್ಸಿಡಿ ಹೆಚ್ಚಳ ಮತ್ತು ಜನರೇ ನಿರ್ಮಿಸಿಕೊಳ್ಳುವ ಯೋಜನೆಗಳು ಜಾರಿಯಾಗಬೇಕು. * ರಾಜ್ಯದಲ್ಲಿರುವ ಖಾಸಗಿ ಮಾಲೀಕತ್ವ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ನೀಡಬೇಕು. * ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಯಾಗಬೇಕು ಮತ್ತು ನೆಲಬಾಡಿಗೆ ಸ್ಲಂಗಳಿಗೆ ನೀತಿ ರೂಪಿಸಬೇಕು. * ರಾಜ್ಯದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಗೊಳಿಸಬೇಕು. * ಸರ್ಕಾರಿ ಶಾಲೆಗಳ ಸಬಲೀಕರಣವಾಗಬೇಕು ಮತ್ತು ಜಿಲ್ಲಾಸ್ಪತ್ರೆಗಳ ಖಾಸಗೀಕರಣ ನಿಲ್ಲಬೇಕು. * ಕರ್ನಾಟಕ ಸಮಗ್ರ ಸ್ಲಂ ಅಭಿವೃದ್ಧಿ ಕಾಯಿದೆ 2018ರ ಕರಡನ್ನು ಜಾರಿ ಮಾಡಬೇಕು. * ನಗರ ಬಡತನದ ಪ್ರಮಾಣವನ್ನು ಇಳಿಕೆ ಮಾಡಬೇಕು. ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ದೀಪಿಕಾ, ಶಂಕ್ರಯ್ಯ, ಅರುಣ್, ಶಾರದಮ್ಮ, ಅರವಿಂದ್, ಮನೋಹರ್ ಶಿರಾ ಸಂಚಾಲಕರಾದ ತಿರುಮಲಯ್ಯ, ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ರಂಗನಾಥ, ಮುಂತಾದವರು ಪಾಲ್ಗೊಂಡಿದ್ದರು.