ಸುದ್ದಿಮೂಲ ವಾರ್ತೆ
ಮೈಸೂರು, ಸೆ. 5 : ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆ ಮತ್ತಿತರ ಕಡೆ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ.
ಒನಕೆ ಚಳುವಳಿ : ಶ್ರೀರಂಗಪಟ್ಟಣದಲ್ಲಿ ಮಹಿಳೆಯರು ಒನಕೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ತಾಲೂಕು ಕಚೇರಿ ವರೆಗೆ ಒನಕೆ ಹಿಡಿದು ಸರ್ಕಾರದ ವಿರುದ್ದ ಘೋಷಣೆ ಕೂಗಿ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಾಲ್ಲೂಕು ಕಚೇರಿ ಎದುರು ಸುಮಾರು ಒಂದು ಗಂಟೆ ಸಮಯ ಪ್ರತಿಭಟನೆ ನಡೆಸಿ, ರಾಜ್ಯದ ಶಾಸಕರು, ಸಂಸದರು ಕಾವೇರಿ ನೀತಿನ ರಕ್ಷಣೆಗೆ ಬರುವಂತೆ ಒನಕೆ ಪ್ರದರ್ಶನದ ಮೂಲಕ ಎಚ್ಚರಿಕೆ ನೀಡಿದರು. ಇದೇ ವೇಳೆ ನೀರಾವರಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.
ರಕ್ತ ಸಹಿ ಚಳವಳಿ : ಬಿಜೆಪಿ ಕಾರ್ಯಕರ್ತರು ಮಂಡ್ಯ ಡಿಸಿ ಕಚೇರಿ ಬಳಿ ರಕ್ತ ಸಹಿ ಮಾಡುವುದನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರ ಜೊತೆ ಬಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದರು. ಕಾರ್ಯಕರ್ತರು, ಯಾಕ್ ಸ್ವಾಮಿ ನಿಮಗೆ ನೀರು ಬೇಡ್ವಾ ? ನಿಮ್ಮ ಪರವಾಗಿಯೂ ನಾವು ಪ್ರತಿಭಟನೆ ಮಾಡ್ತಾ ಇದೀವಿ. ನಿಮಗೂ ಕಾವೇರಿ ನೀರು ಬೇಕು ಅಲ್ವಾ ಎಂದು ಪೊಲೀಸರನ್ನು ಪ್ರಶ್ನಿಸಿದರು.
ಬಳಿಕ ರಕ್ತ ಸಹಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿದರು. ಪತ್ರಕ್ಕೆ ರಕ್ತ ಸಹಿ ಮಾಡಿ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಲಾಗಿದೆ. ಸಹಿಯ ಬಳಿಕ ಮಂಡ್ಯ ಡಿಸಿಗೆ ಬಿಜೆಪಿ ಕಾರ್ಯಕರ್ತರು ಪತ್ರ ನೀಡಿದರು. ಈ ವೇಳೆ ರಕ್ತ ಕೊಟ್ಟೆವೂ ನೀರು ಕೊಡೆವೂ ಎಂದು ಘೋಷಣೆ ಕೂಗಿದರು.
ಸಂಸದರು, ಶಾಸಕರ ವಿರುದ್ದ ಹೋರಾಟ
ಬಿಜೆಪಿ ಕಾರ್ಯಕರ್ತ ಸಿದ್ದರಾಜು ಮಾತನಾಡಿ, ತಮಿಳುನಾಡಿನ ಅಭಿಮಾನಕ್ಕೆ, ಚುನಾವಣೆಗಾಗಿ ನೀರು ಬಿಡುಗಡೆ ಮಾಡಲಾಗಿದ್ದು, ಕೂಡಲೇ ನೀರು ನಿಲ್ಲಿಸಿ ರೈತರನ್ನು ಉಳಿಸಿ. ಬೆಂಗಳೂರಿನ ಜನ ಪಬ್ ಕ್ಲಬ್ ಅಂತ ಕುಳ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನೀರು ಬಂದ್ ಮಾಡಿದರೆ ಅವರಿಗೆ ನೀರು ಸಿಗಲ್ಲ. ಜನರ ಮೇಲೆ ಅಭಿಮಾನ ಇದ್ರೆ ಸಿದ್ದರಾಮಯ್ಯ ಅವರೇ ನೀರು ನಿಲ್ಲಿಸಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕರು ಏನು ಮಾತನಾಡುತ್ತಿಲ್ಲ. ಮಂಡ್ಯ ಶಾಸಕ ಕಾವೇರಿ ಬಗ್ಗೆ ಹೇಳಿಕೆ ಕೊಟ್ಟು ಈಗ ಪತ್ತೆ ಇಲ್ಲ. ಅವರ ಬಾಯಿ ಯಾರು ಮುಚ್ಚಿಸಿದ್ದಾರೋ? ಎಂಪಿ ಅವರು ಒಂದು ದಿನ ಬಂದರು ಅಷ್ಟೆ. ಚುನಾವಣೆಯಲ್ಲಿ ಮಾತ್ರ ಮಂಡ್ಯ ಜನ ಬೇಕು ಇವರಿಗೆ. ಮುಂದಿನ ದಿನಗಳಲ್ಲಿ ಶಾಸಕರು ಹಾಗೂ ಸಂಸದರ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದರು.
ಸುಪ್ರೀಂಗೆ ಅರ್ಜಿ ಸಲ್ಲಿಕೆ
7ನೇ ದಿನವೂ ಕೆಆರ್ ಎಸ್ ನಿಂದ ತಮಿಳುನಾಡಿಗೆ ನೀರು ಹರಿದಿದ್ದು, ಕೂಡಲೇ ನೀರು ನಿಲ್ಲಿಸುವಂತೆ ರೈತರು ಒತ್ತಾಯಿಸಿದ್ದಾರೆ. ಈ ಸಂಬಂಧ ಕಾನೂನು ಹೋರಾಟಕ್ಕೆ ರೈತರು ಮುಂದಾಗಿದ್ದು ವಕೀಲರ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದೆಹಲಿಗೆ ತೆರಳಿದ್ದಾರೆ. ನಾಳೆ ಕಾವೇರಿ ನದಿ ವಿವಾದ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್ ಗೆ ರೈತರ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.