ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ. 12: ಅಲೆಮಾರಿ ಜನಾಂಗಕ್ಕೆ ಸೇರಿದ 93 ಸಮುದಾಯಗಳ ಜನರಿಗೆ ಸರಿಯಾಗಿ ಗುರುತು ಇಲ್ಲವಾಗಿದ್ದು, ಸರ್ಕಾರ ಇವರ ಸಮಸ್ಯೆ ಬಗೆಹರಿಸಿ ರಕ್ಷಣೆಗೆ ಪ್ರತ್ಯೇಕ ಮಂಡಳಿ ರಚಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ. ಸಿಎಸ್ ದ್ವಾರಕನಾಥ್ ನೇತೃತ್ವದ ಅಲೆಮಾರಿ ಸಮುದಾಯದ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದೆ.
ಅಲೆಮಾರಿ ಸಮುದಾಯಗಳ 40 ಕ್ಕೂ ಹೆಚ್ಚು ಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ತಮಗೆ ನಾಗರಿಕ ಸವಲತ್ತುಗಳನ್ನು ಒದಗಿಸುವ ಜತೆಗೆ ತಮ್ಮ ಸಮಯದಾಯಗಳನ್ನು ಮುಖ್ಯವಾನಿಹಿಗೆ ತರಲು ಅಗತ್ಯ ಆರ್ಥಿಕ, ಸಾಮಾಜಿಕ ನೆರವು ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಿಯೋಗದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಕುಮಾರಕೃಪಾ ಅತಿಥಿ ಗೃಹದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಕಳೆದ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಅವರ ರಕ್ಷಣೆಗೆ ಸರ್ಕಾರ ನಿಲ್ಲಬೇಕು ಎಂದು ಮನವಿ ಮಾಡಿದರು. ಈ ವಿಚಾರವಾಗಿ ಸಮಾಜ ಕಲ್ಯಾಣ ಸಚಿವರಾದ ಮಹಾದೇವಪ್ಪ ಅವರನ್ನ ಭೇಟಿ ಮಾಡುವಂತೆ ಡಿಸಿಎಂ ಸೂಚಿಸಿದರು.
ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ದ್ವಾರಕನಾಥ್ ಅವರು ಅಲೆಮಾರಿ ಜನಾಂಗಕ್ಕೆ ಸೇರಿದ 93ಸಮುದಾಯಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಈ ಸಮುದಾಯದವರನ್ನು ಗುರುತಿಸಿ ಅವರ ಸಮಸ್ಯೆ ಬಗೆಹರಿಸಿ ರಕ್ಷಣೆ ನೀಡಲು ಒಂದು ಸಮಿತಿ ರಚನೆಗೆ ಮನವಿ ಮಾಡಿದ್ದಾರೆ. ಸರ್ಕಾರದ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು, ಗುರುತು ಇಲ್ಲದವರಿಗೆ ಗುರುತು ನೀಡಬೇಕು. ತುಳಿತಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಇದು ನಮ್ಮ ಪಕ್ಷದ ಸಿದ್ಧಾಂತ ಹಾಗೂ ಜವಾಬ್ದಾರಿ. ಹೀಗಾಗಿ ನಮ್ಮ ನಾಯಕರ ಜೊತೆ ಚರ್ಚೆ ಮಾಡುತ್ತೇವೆ. ನಂತರ ಸಂಬಂಧ ಪಟ್ಟ ಇಲಾಖೆ ಜೊತೆ ಚರ್ಚಿಸಿ, ಪ್ರತ್ಯೇಕ ನಿಗಮ ಸ್ಥಾಪನೆ ಮಾಡುತ್ತೀರಾ ಎಂಬ ಪ್ರಶ್ನೆಗೆ, “ಮೊದಲು ಈ ಸಮುದಾಯದವರನ್ನು ಗುರುತಿಸಿ ಅವರ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಾಗುವುದು. ನಿಗಮ ಮಂಡಳಿ ಮಾಡಿದ ತಕ್ಷಣ ಸಮಸ್ಯೆ ನಿವಾರಣೆ ಆಗುವುದಿಲ್ಲ. ಈಗಾಗಲೇ ರಚನೆ ಆಗಿರುವ ನಿಗಮ ಮಂಡಳಿಗಳು ಎಲ್ಲಾ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಮೊದಲು ಅವರ ರಕ್ಷಣೆ ಮಾಡುವ ಕಾರ್ಯ ಆಗಬೇಕು” ಎಂದು ಉತ್ತರಿಸಿದರು.
ನಿಷ್ಕ್ರಿಯ ನಿಗಮ ಮಂಡಳಿ ಕೈ ಬಿಡುವ ಕುರಿತಂತೆ, “ಈಗಲೇ ಈ ವಿಚಾರವಾಗಿ ಹೇಳುವುದಿಲ್ಲ. ನಾವು ಮೊದಲು ಬಜೆಟ್ ಮಂಡನೆ ಮಾಡುತ್ತೇವೆ. ಈ ವಿಚಾರವಾಗಿ ಹಣಕಾಸು ಸಚಿವರು ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.
ನಿಯೋಗದಲ್ಲಿ ಸುಡುಗಾಡು ಸಿದ್ಧರು, ದೊಂಬಿದಾಸ, ದಕ್ಕಲಿಗ, ಹಂದಿಜೋಗಿ, ಕೊಲೆಬಸವ, ಹಕ್ಕಿಪಿಕ್ಕಿ, ಕರಡಿ ಕಲಂಧರ್, ಪಿಂಜಾರ/ ನದಾಫ್, ಸೋಲಿಗ, ಜೇನು ಕುರುಬ, ಗ್ಯಾರೆ, ಕೊರವ, ಬೇಡ ಗಂಪಣ, ಗೆಜ್ಜೆಗಾರ, ಬುಡ್ಗ ಜಂಗಮ, ಕಾಡುಗೊಲ್ಲ, ಹಲಾಲ್ ಖೋರ್ ಸಮುದಾ
ಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.