ಸುದ್ದಿಮೂಲ ವಾರ್ತೆ ಕವಿತಾಳ, ಫೆ. 12:
ಜಿಲ್ಲೆಯ ಮಸ್ಕಿ, ಸಿರವಾರ, ಮಾನ್ವಿ ತಾಲೂಕುಗಳ ರೈತರ ಬೇಡಿಕೆಯಾದ ನಾರಾಯಣಪೂರು ಬಲದಂಡೆಯ 5ಎ ಕಾಲುವೆ ಮುಂಗಡ ಪತ್ರದಲ್ಲಿ ಘೋಷಿಸಲು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ 5ಎ ಹೋರಾಟ ವೇದಿಕೆ ಪ್ರತಿಭಟನಾ ಧರಣಿ ನಡೆಸಿದವು.
ಈ ಕುರಿತು ಜಂಟಿಯಾಗಿ ಧರಣಿ ಆರಂಭಿಸಿರುವ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ, ಕಾರ್ಯದರ್ಶಿ ಹಾಗೂ ಪ್ರತಿಪಕ್ಷದ ನಾಯಕರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು. ಈಗಾಗಲೇ 15 ವರ್ಷಗಳ ಹೋರಾಟದ ಮೂಲಕ ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ, ನಿಯೋಗದಲ್ಲಿ ತೆರಳಿ ಮನವಿ ಮಾಡಲಾಗಿದೆ ಅಲ್ಲದೆ, ಈ ಹಿಂದೆ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಡಿಪಿಆರ್ ತಯಾರಿಸಲಾಗಿತ್ತು.
ಆದರೆ, ರೈತರ ಪ್ರಮುಖ ಬೇಡಿಕೆಯಾದ ನೀರಾವರಿಯ 5ಎ ಕಾಲುವೆ ಮಂಜೂರಾತಿ ಮಾಡದೆ ಪಣಜಿ-ಹೈದ್ರಾಬಾದ್ ರಸ್ತೆ ಘೋಷಣೆ ಮಾಡಿದ್ದು ರೈತರ ಬಗ್ಗೆ ಇವರಿಗೆ ಕಾಳಜಿ ಇಲ್ಲದಿರುವುದು ತೋರಿಸುತ್ತದೆ ಎಂದು ದೂರಿದರು.
ನಂದವಾಡಗಿ ಹನಿ ನೀರಾವರಿ ಕಾಮಗಾರಿ ಕಂಪನಿಗಳಿಗೆ ಅನುಕೂಲ ಆಗಿದೆ ವಿನಃ 1464 ಕೋಟಿ ಮೊತ್ತದ ಕಾಮಗಾರಿಯಲ್ಲಿ ಎನ್.ಡಿ.ವಡ್ಡರ್ ಕಂಪನಿಯ ಬಹುದೊಡ್ಡ ಪಾಲು ಇದೆ ಎಂದು ದೂರಿದರು.
ಕೆಲಸ ಮಾಡದ ಕಂಪನಿಗೆ ಬಿಲ್ ಪಾವತಿಸಲಾಗುತ್ತಿದೆ. ನಂದವಾಡಗಿ, ಎನ್ಆರ್ಬಿಸಿ 5 ಸಾವಿರ ಕೋಟಿ ಮೊತ್ತದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ನ್ಯಾಯಾಂಗ ತನಿಖೆಗೆ ಆದೇಶ ಮಾಡಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆರ್.ಮಾನಸಯ್ಯ, ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಸೈಯದ್ ಅಬ್ಬಾಸ್ ಅಲಿ, ಸಂತೋಷ ಹಿರೇದಿನ್ನಿ, ಹೂವ್ವಪ್ಪ ಪಾಮನಕಲ್ಲೂರು, ತಿಪಣ್ಣ ಚಿಕ್ಕಹೆಸರೂರು ಸೇರಿ ಇತರರಿದ್ದರು.