ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ 30 : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ ಸಮಗ್ರ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ ಭೂ ಸಂತ್ರಸ್ತರು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 6 ತಿಂಗಳು ಪೂರ್ಣಗೊಂಡಿದ್ದು, ಜುಲೈ 3 ರಿಂದ ಆರಂಭವಾಗುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಮಗ್ರ ತಿದ್ದುಪಡಿ ಮಸೂದೆ ಮಂಡಿಸಿ ಅನುಮೋದನೆ ಪಡೆಯಬೇಕೆಂದು ಎಸ್.ಸಿ.ಎಸ್.ಟಿ, ಪಿಟಿಸಿಎಲ್ ಕಾಯ್ದೆ ವಂಚಿತರ ಹೋರಾಟ ಸಮಿತಿ ಹಾಗೂ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಆಗ್ರಹಿಸಿದೆ.
ಹೋರಾಟಕ್ಕೆ 160 ದಿನಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ನಡೆಸಿದ ಸಂಘಟನೆಗಳು ಈ ಕುರಿತು ನಿರ್ಣಯ ಕೈಗೊಂಡಿವೆ. ಜುಲೈ 3 ರಿಂದ ಆರಂಭವಾಗುತ್ತಿರುವ ಹಾಲಿ ಸರ್ಕಾರದ ಚೊಚ್ಚಲ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಬೇಕು. ದಲಿತ ಸಮುದಾಕ್ಕೆ ನೀಡಿರುವ ಭರವಸೆಯನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಎಸ್.ಸಿ,ಎಸ್.ಟಿ ಸಮುದಾಯದ ಲಕ್ಷಾಂತರ ಕುಟುಂಬ ತೀವ್ರ ಸಂಕಷ್ಟದಲ್ಲಿದ್ದು, ಕಾಯ್ದೆಗೆ ತಿದ್ದುಪಡಿ ತಂದು ದಲಿತ ಸಮಯದಾಯವನ್ನು ಬಲಪಡಿಸಬೇಕು. ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢರನ್ನಾಗಿಮಾಡಿ ಸಂವಿಧಾನದ ಆಶಯದಂತೆ ಮತ್ತು ನುಡಿದಂತೆ ನಡೆಯಬೇಕು ಎಂದು ಭೂವಂಚಿತರ ಹೋರಾಟ ಸಮಿತಿ ಮುಖಂಡ ಮಂಜುನಾಥ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜ್ಞಾನ ಪ್ರಕಾಶ್ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ದಲಿತ ಸಂಘಟನೆಗಳ ಮುಖಂಡುರಗಳಾದ ಹೆಣ್ಣೂರು ಶ್ರೀನಿವಾಸ್, ಬಿ. ಗೋಪಾಲ್, ಎನ್. ಮೂರ್ತಿ, ಹರಿರಾಮ್, ಮೋಹನ್ ರಾಜ್, ರಾಮಣ್ಣ, ಪಿಟಿಸಿಲ್ ಮಂಜುನಾಥ್, ಅಭಿಗೌಡ್ರು, ಗಂಗಮ್ಮ, ಸಿದ್ದರಾಜ, ಬಿ.ಎಂ ವೆಂಕಟೇಶ್, ಕಿರಣ್ ಕುಮಾರ್, ಹೆಬ್ಬಾಳ ವೆಂಕಟೇಶ್, ಈಶ್ವರ್ ಮಂಜುನಾಥ್, ಸುರೇಶ್, ಸಂತೋಷ್, ಜೆ.ವಿ. ವೆಂಕಟೇಶ್, ನಾಗರಾಜ ಬಸವರಾಜ ಕೌತಾಳ್, ಆರೋಲಿಕರ್, ಮಂಜು, ಮತ್ತಿತರರು ಉಪಸ್ಥಿತರಿದ್ದರು.