ಕಲಬುರಗಿ, ಜು.3: ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ರೈತರು ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿಗಳು ಕಚೇರಿ ಮುಂದೆ ಕೆಪಿಆರ್ ಎಸ್ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿ, ಪ್ರತಿ ಎಕರೆಗೆ 25,000 ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ದನ ಕರುಗಳಿಗೆ ಕಣಿಕಿ ವಿತರಿಸಬೇಕು. ಬರಗಾಲದ ಕಾಮಗಾರಿ ಪ್ರಾರಂಭಿಸಬೇಕು. ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಕಳಪೆ ಮಟ್ಟದ ಹತ್ತಿ ಬೀಜ ವ್ಯಾಪಾರ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಲು ಒತ್ತಾಯ ಮಾಡಿದ ಅವರು, ಡಿಸಿಸಿ ಬ್ಯಾಂಕ್ ನಲ್ಲಿ ಅವ್ಯವಹಾರ ಸೂಕ್ತ ವಾದ ತನಿಖೆ ನಡೆಸಿ ಅಧಿಕಾರಿಗಳು ಮೇಲೆ ಕಾನೂನು ಕ್ರಮ ಜರುಗಿಸಿ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.
ಸಾಯಬಣ್ಣಾ ಗುಡಬಾ, ಸಂತೋಷ ಹೊಸಮನಿ, ಅಲ್ತಾಫ್ ಇನಾಂದಾರ್, ದಿಲೀಪ್ ಕುಮಾರ್ ನಾಗೂರೆ, ರಾಯಪ್ಪಾ ಹರಮುಂಜಿ, ರೇವಣಸಿದ್ದಪ್ಪಾ ಪಾಟೀಲ್ ಸೇರಿದಂತೆ ಇತರರು ಇದ್ದರು.