ಸುದ್ದಿಮೂಲ ವಾರ್ತೆ,
ಚಿಕ್ಕಬಳ್ಳಾಪುರ, ಜು.2: ರಾಜ್ಯದಲ್ಲಿ ರೇಷ್ಮೆ ಉದ್ಯಮದ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಬಜೆಟ್ ಹೆಚ್ಚಳ ಮಾಡಲು ಕ್ರಮ ಕೈಗೊಂಡು ರೇಷ್ಮೆ ಬೆಳೆಗಾರರ ಮತ್ತು ನೂಲು ಬಿಚ್ಚಾಣಿಕೆದಾರರ ಅಭಿವೃಧ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಸಿಲ್ಕ್ ಅಸೋಸಿಯೇಷನ್ನ ನಿಯೋಗ ರೇಷ್ಮೆ ಸಚಿವ ವೆಂಕಟೇಶ್ ಅವರನ್ನು ಮನವಿ ಮಾಡಿತ್ತು.
ಸಂಸ್ಥೆಯ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಭ್ರಮಣ್ಯಂ ಅವರ ನೇತೃತ್ವದಲ್ಲಿ ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಸಂಘಟನೆಯ ಕಾರ್ಯದರ್ಶಿ ಎಂ.ರಾಮಚಂದ್ರಗೌಡ ಮತ್ತಿತರರು ರಾಜ್ಯ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ವೆಂಕಟೇಶ್ ಅವರನ್ನು ಭೇಟಿ ಮಾಡಿ ರೇಷ್ಮೆ ಉದ್ಯಮದ ಅಭಿವೃಧ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು.
ರಾಜ್ಯದಲ್ಲಿ ರೇಷ್ಮೆ ಉದ್ಯಮದಲ್ಲಿ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ಎರಡು ಕಣ್ಣುಗಳಾಗಿದ್ದು ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರ ಅಭಿವೃಧ್ಧಿಗೆ ಕ್ರಮ ಕೈಗೊಳ್ಳಬೇಕು ಜೊತೆಗೆ ರೇಷ್ಮೆ ಉದ್ಯಮದಲ್ಲಿ ಆಧುನಿಕ ವ್ಯವಸ್ಥೆಯ ಅನುಷ್ಠಾನಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಂಡು ಈ ಬಾರಿ ಬಜೆಟ್ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕೆಂದು ಕೋರಿದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರ ಪ್ರವಾಗಿ ಸಿಲ್ಕ್ ಸಮಗ್ರ-02 ತಾಂತ್ರಿಕ ಸಮಿತಿಯ ಸದಸ್ಯ ಮೊಹ್ಮದ್ ಅನ್ವರ್ ಮಾತನಾಡಿ ರಾಜ್ಯದಲ್ಲಿ ಅಧಿಕೃತವಾಗಿ ಸುಮಾರು 7 ಸಾವಿರ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಇಲಾಖಾ ಪರವಾನಗಿಯನ್ನು ಹೊಂದಿದ್ದಾರೆ ಸುಮಾರು 50 ಸಾವಿರಕ್ಕೂ ಅಧಿಕ ಕಾರ್ಮಿಕರೊಂದಿಗೆ 30 ಸಾವಿರ ಕಾಟೇಜ್/ಫಿಲೇಚರ್ ಬೇಸಿನ್ ಹಾಗೂ ಚರಕಗಳೊಂದಿಗೆ ಕಾರ್ಯನಿರ್ವಹಿಸುತ್ತಾ ರೇಷ್ಮೆ ಉದ್ದಿಮೆಯ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ ಇಡೀ ರೇಷ್ಮೆ ಉದ್ದಿಮೆಯು ಶೇ.75% ರಷ್ಟು ಅವಿದ್ಯಾವಂತರು ಹಾಗೂ 80% ರಷ್ಟು ಬಡವರನ್ನು ಒಳಗೊಂಡು ಕಷ್ಟಕಾರ್ಪಣ್ಯದೊಂದಿಗೆ ಕೆಲಸ ಮಾಡುವ ಹಾಗೂ ಶೇ. 100 ರಷ್ಟು ಅಸಂಘಟಿತ ವಲಯದ ಮೇಲೆ ಆಧಾರವಾಗಿದೆ ಎಂದರು.
ನಿಯೋಗದಲ್ಲಿ ಕೆ.ಎಸ್.ಎಂ.ಬಿ ಮಾಜಿ ಅಧ್ಯಕ್ಷೆ ಸ್ವೀತಾ ಅಮರ್ಶೆಟ್ಟಿ, ಆಲ್ ಇಂಡಿಯಾ ಸಿಲ್ಕ್ ಅಸೋಸಿಯೇಷನ್ನ ಪದಾಧಿಕಾರಿಗಳಾದ ಎಂ.ಆರ್.ಗೌಡ, ಸಿಎಸ್ಬಿ ನಿವೃತ್ತ ವಿಜ್ಞಾನಿಗಳಾದ ಡಾ.ಬಸವರಾಜ್, ಡಾ.ಇ.ಮುನಿರಾಜು, ಪ್ರಗತಿಪರ ರೇಷ್ಮೆ ಬೆಳೆಗಾರರ ಮಳ್ಳೂರು ಹರೀಶ್, ನವೀನ್ ಎಸ್.ಬಿ, ವೈ.ಬಿ.ರವಿ, ಚಂಗನಮಲ್, ಸತ್ಯನಾರಾಯಣ, ಜೆ.ಎಂ.ಮುನಿರಾಜು, ಎಫ್.ಪಿ.ಓ ನಿರ್ದೇಶಕ ಸೈಯದ್ ಫಾರುಖ್ ಮತ್ತಿತರರು ಉಪಸ್ಥಿತರಿದ್ದರು.