ಕಲಬುರಗಿ, ಜು.4: ಕಲಬುರಗಿ ನಗರದಿಂದ ಬೆಂಗಳೂರಿಗೆ ಹೊಸ 2 ರೈಲು ಪ್ರಾರಂಭಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುನೀತರಾಜ್ ಕವಡೆ ನೇತೃತ್ವದಲ್ಲಿ ನಗರದ ರೈಲು ನಿಲ್ದಾಣದಲ್ಲಿ ಎದುರು ಪ್ರತಿಭಟನೆ ನಡೆಸಿ ರೇಲ್ವೆ ಮುಖ್ಯ ಪ್ರಬಂಧಕರ ಮೂಲಕ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕಲಬುರಗಿ ಜಿಲ್ಲೆ ಹಾಗೂ ನಗರವು ತುಂಬಾ ಬೃಹದಾಕಾರವಾಗಿ ಬೆಳೆದಿದ್ದು, ಜನಸಂಖ್ಯೆಯಲ್ಲಿಯೂ ಕೂಡಾ ಏರಿಕೆಯಾಗಿದ್ದು, ಸದ್ಯ ಚಲಿಸುವ ರೈಲುಗಳಲ್ಲಿ ಸ್ಥಳಾವಕಾಶ ವಿಲ್ಲದೇ ಬೆಂಗಳೂರಿಗೆ ಹೋಗಲು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅದರಂತೆ ಬೆಂಗಳೂರಿಗೆ ಹೋಗಲು ಕಲಬುರಗಿಯಿಂದ ಸಾಕಷ್ಟು ಜನ ವ್ಯಾಪಾರಿಗಳೂ, ರಾಯಕೀಯ ವ್ಯಕ್ತಿಗಳು, ಐಟಿಬಿಟಿ ಉದ್ಯೋಗಿಗಳು ಹಾಗೂ ಇನ್ನಿತರರು ಗಣನೀಯವಾಗಿ ಹೋಗುತ್ತಿದ್ದಾರೆ. ಇದರಿಂದಾಗಿ ಸಕಾಲದಲ್ಲಿ ಪ್ರಯಾಣಿಸಲು ತುಂಬಾ ತೊಂದರೆಯಾಗುತ್ತಿದೆ.
ಅದರಂತೆ ಹಗಲು ಹೊತ್ತಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ಕೇವಲ ಒಂದು ರೈಲು ಇದ್ದು. ಅದು ಕೂಡಾ ತುಂಬಾ ಜನದಟ್ಟಣೆಯಿಂದ ಕೂಡಿರುತ್ತದೆ.
ಆದ್ದರಿಂದ ನಮ್ಮ ಮನವಿ ಪತ್ರವನ್ನು ಪರಿಗಣಿಸಿ, ಕೂಡಲೇ ಕಲಬುರಿಗಿಯಿಂದ ಬೆಂಗಳೂರಿಗೆ ನೂತನ 2 ರೈಲು ( ಒಂದು ಬೆಳಿಗ್ಗೆ ಹಾಗೂ ಒಂದು ರಾತ್ರಿ) ಕೂಡಲೇ ಪ್ರಾರಂಭಿಸಲು ಕ್ರಮ ಕೈಕೊಳ್ಳಬೇಕು. ಒಂದು ವೇಳೆ ನಮ್ಮ ಮನವಿಯನ್ನು 1 ತಿಂಗಳ ಒಳಗಾಗಿ ಪರಿಗಣಿಸದೇ ಇದ್ದರೆ ಸಂಘಟನೆ ವತಿಯಿಂದ ರೈಲು ನಿಲ್ದಾಣದಲ್ಲಿ ರೈಲು ರೋಕೊ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಈರಣ್ಣಾ ಅಲ್ದೆ, ನಿಸಾರ ಅಹ್ಮದ್, ಕಲ್ಯಾಣಿ ತಳವಾರ, ಧರ್ಮಸಿಂಗ ತಿವಾರಿ, ಉಸ್ಮಾನ ಸಾಬ್, ವಿಠ್ಠಲ ಪೂಜಾರಿ, ದೇವಿಂದ್ರ, ಶರಣಪ್ಪ, ಶಿವಲಿಂಗ, ಅಲ್ಲಿಸಾಬ್, ಶೋಭಾ, ಮಲ್ಲಿಕಾರ್ಜುನ, ಪ್ರಭು ಸೇರಿದಂತೆ ಇತರರಿದ್ದರು.