ಸುದ್ದಿಮೂಲ ವಾರ್ತೆ
ತುಮಕೂರು, ಏ.30: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳ್ಳಬೇಕಾದರೆ ಮತದಾರರಾದ ನಾವು
ತಪ್ಪದೇ ನಮ್ಮ ಮತದಾನ ಹಕ್ಕನ್ನು ಚಲಾಯಿಸಬೇಕು, ಇದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಮತದಾರರಿಗೆ ಮನವಿ ಮಾಡಿದರು.
ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದ ಅಂಗವಾಗಿ ನಗರದ ಕಾವೇರಿ ಶಾಲೆ, ಆಳಶೆಟ್ಟಿಕೆರೆಪಾಳ್ಯದ ಮತಗಟ್ಟೆ ಸಂಖ್ಯೆ 138 ರಿಂದ 144 ಇಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಾದ್ಯಂತ ಶೇಕಡಾ ನೂರಕ್ಕೆ ನೂರರಷ್ಟು ಮತದಾನ ಗುರಿ ಹೊಂದುವ ಮೂಲಕ ಸರ್ವಕಾಲಿಕ ದಾಖಲೆ ಮಾಡುವ ಉದ್ದೇಶದಿಂದ ಇಂತಹ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮೇ 10ರಂದು ಜಿಲ್ಲೆಯ ಎಲ್ಲಾ ಮತಬಾಂಧವರು ಮತ ಕೇಂದ್ರಗಳಿಗೆ ಬಂದು ಮತ ಚಲಾಯಿಸಿದಾಗ ನಮ್ಮ ಸ್ವೀಪ್ ಚಟುವಟಿಕೆಗಳ ಸದುದ್ದೇಶ ಸಫಲವಾಗುತ್ತದೆ ಎಂದರಲ್ಲದೆ, ಮತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಈ ಎಲ್ಲಾ ಚಟುವಟಿಕೆಗಳ ಸದುದ್ದೇಶವಾಗಿರುತ್ತದೆ. ಜಿಲ್ಲೆಯ 2683 ಬಿಎಲ್ಓ ಗಳು ಸಕ್ರಿಯವಾಗಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ದಾಖಲೆ ಪ್ರಮಾಣಲ್ಲಿ ಮನೆ ಮನೆ ಭೇಟಿ ಮಾಡಿರುತ್ತಾರೆ. ಜಿಲ್ಲಾ ಚುನಾವಣಾಧಿಕಾರಿಯಾಗಿ ಹಾಗೂ ಸ್ವೀಪ್ ಸಮಿತಿ ಪರವಾಗಿ ಇವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಮತದಾನದ ಕೇಂದ್ರಗಳ ಬಗ್ಗೆ ಅರಿವಿಲ್ಲದೆ ಮತದಾನಕ್ಕೆ ಬಾರದೇ ಇರುವ ಸಂಭವ ಹಿನ್ನೆಲೆಯಲ್ಲಿ ಮೇ 1ರಿಂದ ಮತದಾರರಿಗೆ ವೋಟರ್ ಸ್ಲಿಪ್ ವಿತರಿಸುವ ಕಾರ್ಯಕ್ರಮವಿದ್ದು ಎಲ್ಲಾ ಮತದಾರರಿಗೆ ವೋಟರ್ ಸ್ಲಿಪ್ ತಲುಪಿದಲ್ಲಿ ಅವರು ಖಚಿತವಾಗಿ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುತ್ತಾರೆ. ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಬಿಎಲ್ಓ ಗಳಿಗೆ ಮತದಾರರ ಬಗ್ಗೆ ಸಂಪೂರ್ಣ ಅರಿವಿದ್ದು ಅವರು ಈ ಬಾರಿ ಮತದಾರರಿಗೆ ವೋಟರ್ ಸ್ಲಿಪ್ ವಿತರಿಸಲಿದ್ದಾರೆ ಎಂದರು.
ಈ ಬಾರಿ ನಗರ ಪ್ರದೇಶಗಳಲ್ಲೂ ಬಿಎಲ್ಓಗಳು ಮನೆ-ಮನೆ ತಲುಪುವ ಪ್ರಯತ್ನ ಮಾಡಿದ್ದಾರೆ. ದಿವ್ಯಾಂಗ ಹಾಗೂ 80+ ಮತದಾರರ ಮನೆಗೆ ತೆರಳಿ ಮತದಾನದ ವ್ಯವಸ್ಥೆ ಮಾಡಲಾಗಿದೆ. ಆದರೆ ಸುಶಿಕ್ಷಿತರಾದ ನಾವು ಮೇ 10ರಂದು ಮನೆಯಲ್ಲಿ ಕೂರದೆ ಮತಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಹಬ್ಬದ ಅಂಗವಾಗಿ ಮತಗಟ್ಟೆಗಳ ಆವರಣದಲ್ಲಿ ಧ್ವಜಾರೋಹಣ ನೇರವೇರಿಸುವುದು ಮತದಾರರನ್ನು ಎಚ್ಚರಿಸಲು ಹಾಗೂ ಮತದಾರರಿಗೆ ಮತಗಟ್ಟೆಗಳ ಬಳಕೆ ಮಾಹಿತಿ ನೀಡುವುದೇ ಆಗಿದೆ ಎಂದ ಅವರು, ವಿದ್ಯಾವಂತರು ಹೆಚ್ಚು ಇರುವ ಕಡೆ ಮತದಾನದ ಪ್ರಮಾಣ ಹೆಚ್ಚಿರಬೇಕು ಆದರೆ ವಿಪರ್ಯಾಸ ಎಂದರೆ ಇಲ್ಲಿಯೇ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.
ನಗರ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 95ಕ್ಕೂ ಹೆಚ್ಚಿರುತ್ತದೆ ಆದರೆ ಮತದಾನದ ಪ್ರಮಾಣ ಶೇ 65 ರಿಂದ 68ರ ನಡುವೆಯೇ ಇದೆ. ಇಂದು ಧ್ವಜಾರೋಹಣ ನೇರವೇರಿಸಿದಂತಹ ನಗರದ ಆಳಶೆಟ್ಟಿಕೆರೆಪಾಳ್ಯದ ಕಾವೇರಿ ಶಾಲೆಯ ೭ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಶೇಕಡಾ 45ರಷ್ಟಿದ್ದು, ಇಲ್ಲಿ ಈ ಬಾರಿ ದಾಖಲಾರ್ಹ ರೀತಿಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಬೇಕೆಂದು ಮತದಾರರಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ. ಕೆ. ವಿದ್ಯಾಕುಮಾರಿ ಅವರು ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ವಿ.ದರ್ಶನ್ ಉಪಸ್ಥಿತರಿದ್ದರು. ತದ ನಂತರ ಈ ಮತಗಟ್ಟೆಯಿಂದ ಶಾಂತಿನಗರದ ಉದ್ಯಾನವನದವರೆಗೆ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.