ಸುದ್ದಿಮೂಲ ವಾರ್ತೆ
ತಿಪಟೂರು, ಜು 13 : ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬಾಳೆ ಬೆಳೆಯ ಸಮಗ್ರ ಬೆಳೆ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಸ್ತರಣಾ ವಿಜ್ಞಾನಿ ಎಂ.ಇ. ದರ್ಶನ್ ಮಾತನಾಡಿ, ಮುಂಚೂಣಿ ಪ್ರಾತ್ಯಕ್ಷಿಕೆಯು
ನೋಡಿ ತಿಳಿ, ಮಾಡಿ ಕಲಿ ತತ್ವವನ್ನು ಆಧರಿಸಿದ್ದು, ತಂತ್ರಜ್ಞಾನದ ಮೌಲ್ಯವನ್ನು
ಬೋಧಿಸಲು ಹಾಗೂ ರೈತರಿಗೆ ಮನದಟ್ಟಾಗುವಂತೆ ಮಾಡಲು ಉಪಯೋಗಿಸುವ ವಿಸ್ತರಣಾ ಭೋಧನ ವಿಧಾನ. ಈ ಪ್ರಾತ್ಯಕ್ಷಿಕೆಯು ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಗುವ ಒಂದು ಫಲಿತಾಂಶ ಪ್ರಾತ್ಯಕ್ಷಿಕೆಯಾಗಿದೆ ಎಂದರು.
ಪ್ರಾತ್ಯಕ್ಷಿಕೆಗಳಲ್ಲಿ ಆ ತಂತ್ರಜ್ಞಾನಗಳ ಮೌಲ್ಯ ಮತ್ತು ಸ್ಥಳೀಯ ಅನ್ವಯಿಕತೆ ಪ್ರದರ್ಶಿಸಲು ಒಂದು ನಿರ್ದಿಷ್ಟ ಪರಿಸರದಲ್ಲಿ ನಡೆಸಲಾಗುವುದು. ಈ ಪ್ರಾತ್ಯಕ್ಷಿಕೆಗಳನ್ನು ತಮ್ಮದೇ
ಪರಿಸರದಲ್ಲಿ ನಡೆಸುವುದರಿಂದ ವಿಸ್ತರಣಾ ಕಾರ್ಯಕರ್ತರಿಗೆ ಹಾಗೂ ರೈತರಿಗೆ ತಂತ್ರಜ್ಞಾನಗಳ ಕಾರ್ಯಕ್ಷಮತೆಯನ್ನು ನೇರವಾಗಿ ನೋಡುವ ಹಾಗೂ ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ ಮನದಟ್ಟು ಮಾಡಿಕೊಳ್ಳುವ ಅವಕಾಶವಿರುತ್ತದೆ ಎಂದರು.
ತೋಟಗಾರಿಕಾ ವಿಜ್ಞಾನಿ ಡಾ. ಕೆ. ಕೀರ್ತಿಶಂಕರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಬಾಳೆ ಬೆಳೆಗಳನ್ನು ವಾಣಿಜ್ಯವಾಗಿ ಬೆಳೆಯುತ್ತಿದ್ದಾರೆ. ಬಾಳೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ, ರಸವಾರಿ ಕಂದುಗಳ ನಿರ್ವಹಣೆ, ಅಂಗಾಂಶ ಬಾಳೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನೆರೆದಿದ್ದ ರೈತರಿಗೆ ಬಾಳೆ ಸ್ಪೆಷಲ್ ಸಿಂಪಡಣೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಗೃಹ ವಿಜ್ಞಾನಿಗಳಾದ ಡಾ. ನಿತ್ಯಶ್ರೀ, ಕೃಷಿ ಹವಮಾನ ಶಾಸ್ತ್ರದ ವಿಷಯ ತಜ್ಞ ಡಾ. ಪದ್ಮನಾಭನ್ ಸೇರಿದಂತೆ ರೈತರು ಭಾಗವಹಿಸಿದ್ದರು.