ಕೆ.ಆರ್.ಪುರ, ಜೂ,25: ಕುಂದಲಹಳ್ಳಿಯ ಸಿ.ಎಂ.ಆರ್.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಸಿ.ಎಂ.ಆರ್.ಟಿ.ರಾಷ್ಟ್ರೀಯ ಸೋಶಿಯಲ್ ಹ್ಯಾಕಥಾನ್ ಸ್ಪರ್ಧೆ-2023 ವಿದ್ಯಾರ್ಥಿಗಳಿಂದ ಇಂಧನ ರಹಿತ ವಾಹನಗಳು ಮತ್ತು ಕುಕ್ಕಿಂಗ್ ರೋಬೋಟ್ಸ್ ತಂತ್ರಜ್ಞಾನವುಳ್ಳ ಆವಿಷ್ಕಾರ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ವಿದ್ಯಾರ್ಥಿಗಳು ಹಲವು ತಂತ್ರಜ್ಞಾನದ ಅನ್ವೇಷಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸ್ವಯಂಚಾಲಿತ ಇಂಧನ ರಹಿತ ವಾಹನಗಳ ಅನ್ವೇಷಣೆ ಮತ್ತು ಮೂರು ಹಂತದ ಹೋಟೆಲ್ ಉದ್ಯಮಕ್ಕೆ ಉಪಯುಕ್ತವಾದ ಆವಿಷ್ಕಾರದ ಪ್ರದರ್ಶನಕ್ಕೆ ಪ್ರಥಮ ಬಹುಮಾನ ದೊರೆಯಿತು.
ರಾಷ್ಟ್ರೀಯ ಸೋಶಿಯಲ್ ಹ್ಯಾಕಥಾನ್ ಸ್ಪರ್ಧೆಗೆ ಸುಮಾರು 108 ತಂಡಗಳ ಹೆಸರನ್ನು ನೊಂದಾಯಿಸಿಕೊಂಡಿದ್ದವು. ಅಂತಿಮವಾಗಿ 25 ತಂಡಗಳು ಸ್ಪರ್ಧೆಗೆ ಅರ್ಹತೆ ಪಡೆದಿದ್ದವು.
ಸಿ.ಎಂ.ಆರ್.ಟಿ ವಿದ್ಯಾರ್ಥಿಗಳ ತಂಡ ಆವಿಷ್ಕಾರ ಮಾಡಿದ್ದ ಸ್ವಯಂಚಾಲಿತ ಇಂಧನ ರಹಿತ ವಾಹನಕ್ಕೆ ಯಾವುದೇ ಇಂಧನ ಬೇಕಾಗಿಲ್ಲ. ಸೂಪರ್ ಕ್ಯಾಪಸಿಟರ್ ತಂತ್ರಜ್ಞಾನದ ಸಹಾಯದಿಂದ ಸರಾಗವಾಗಿ ಓಡುವ ಸಾಮರ್ಥ್ಯ ಹೊಂದಿದೆ ಎಂದು ಎಐಎಂಎಲ್ ಇಂಜಿನಿಯರಿಂಗ್ ವಿದ್ಯಾರ್ಥಿ ರಾಕೇಶ್ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಜಯ್ ಜೈನ್, ವಿದ್ಯಾರ್ಥಿಗಳ ಅನ್ವೇಷಣಾ ತಂತ್ರಜ್ಞಾನವನ್ನು ಶ್ಲಾಘಿಸಿದರು. ಪ್ರಾಧ್ಯಾಪಕಿ ಡಾ.ಶರ್ಮಿಳಾ ಇದ್ದರು.