ಸುದ್ದಿಮೂಲ ವಾರ್ತೆ
ಮೈಸೂರು, ಆ.19:ಇತ್ತೀಚಿನ ದಿನಗಳಲ್ಲಿ ಹಳೆಯ ಕರಕುಶಲ ಕಲೆಗಳು ಮತ್ತಷ್ಟು ಪ್ರಖ್ಯಾತಿ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮರಳಿ ಹಳೆಯ ಕರಕುಶಲ ಕಲೆಗಳತ್ತ ಸಾಗಬೇಕಿದೆ ಎಂದು ಸಣ್ಣ ಪ್ರಮಾಣದ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪುರ ಕರೆ ನೀಡಿದರು.
ಗುರುವಾರ ನಗರದ ಕಲಾಮಂದಿರದಲ್ಲಿ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ, ಅಖಿಲ ಭಾರತ ಹಾಗೂ ರಾಜ್ಯಮಟ್ಟದ ಕರಕುಶಲ ಕಲೆಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು.
ದಸರಾ ಮಹೋತ್ಸವವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತಿದೆ. ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಕಲಾವಿದರುಗಳು ಸೇರಿದಂತೆ ಪ್ರೇಕ್ಷಕರು ಆಗಮಿಸುತ್ತಿದ್ದಾರೆ. ವಿದೇಶಿ ಪ್ರವಾಸಿಗರು ಈ ಸಂದರ್ಭದಲ್ಲಿ ಮೈಸೂರಿಗೆ ಹೆಚ್ಚು ಆಗಮಿಸುತ್ತಿದ್ದು, ದಸರಾ ಮಹೋತ್ಸವದ ಅಂಗವಾಗಿ ತೆರೆದಿರುವ ಎಲ್ಲಾ ವಸ್ತು ಪ್ರದರ್ಶನದ ಮಳಿಗೆಗಳು ಎಲ್ಲರನ್ನು ಆಕರ್ಷಿಸುತ್ತಿವೆ. ದಸರಾ ಮೂಲಕ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡುವ ಕೆಲಸವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜರ ಕಾಲದಲ್ಲಿಯೇ ಮೈಸೂರು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕಲೆಗಳನ್ನು ಪೋಷಿಸುವ, ಪ್ರೋತ್ಸಾಹಿಸುವ ಈ ಊರಿನಲ್ಲಿ ಕಲಾಕೃತಿಗಳಿಗೆ ಬಹಳಷ್ಟು ಬೇಡಿಕೆ ಇದೆ. ಕಲಾವಿದರ ಕಲೆಗಳನ್ನು ನಾವು ಗೌರವಿಸಬೇಕಿದೆ. ಕಲಾವಿದರು ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.
ಶಾಸಕ ಕೆ ಹರೀಶ್ ಗೌಡ ಮಾತನಾಡಿ, ಕರಕುಶಲ ಕಲೆಗಳನ್ನೇ ಆಧರಿಸಿ ಮೈಸೂರು ನಗರದಲ್ಲಿ ಹೆಚ್ಚು ಜನ ಬದುಕು ಕಟ್ಟಿಕೊಂಡಿದ್ದಾರೆ. ಶಿಲ್ಪಗಳ ಕೆತ್ತನೆಯನ್ನೇ ಕಸುಬನ್ನಾಗಿಸಿ ಜೀವನ ಕಟ್ಟಿಕೊಂಡಿದ್ದಾರೆ. ಕರಕುಶಲಕರ್ಮಿಗಳ ಜೀವನಧಾರ ಅವರ ಕಲೆಯೇ ಆಗಿದ್ದು, ಈ ಕಲೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿದೆ ಎಂದರು.
ಡಿಸಿಪಿ ಮುತ್ತುರಾಜ್, ಲಲಿತ ಕಲೆ ಹಾಗೂ ಕರಕುಶಲ ಉಪಸಮಿತಿ ಉಪವಿಶೇಷಾಧಿಕಾರಿದೇವರಾಜು, ಕಾರ್ಯಧ್ಯಕ್ಷೆ ನಾಜಿಯಾ ಸುಲ್ತಾನ ಕಾರ್ಯದರ್ಶಿ ಬಿ. ರಶ್ಮಿ, ಅಧ್ಯಕ್ಷೆ ಹೇಮಲತಾ, ಉಪಾಧ್ಯಕ್ಷ ಜಯಚಂದ್ರ ಹಾಗೂ ಮಹಮ್ಮದ್ ಅಕ್ಬರ್ ಅಲಿ ಇದ್ದರು.