ಸುದ್ದಿಮೂಲ ವಾರ್ತೆ
ತುಮಕೂರು ಆ.17: ಮಲೇರಿಯಾ, ಚಿಕುನ್ ಗುನ್ಯಾ, ಡೆಂಗ್ಯೂ ಮತ್ತು ಮೆದುಳುಜ್ವರ ಕಾಯಿಲೆಗಳು ಮಾನ್ಸೂನ್ ಮಳೆಗಾಲದ ನಂತರ ಉಲ್ಬಣಗೊಂಡು ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ಹೆಚ್ಚಾಗಿ ಸಂಭವಿಸುತ್ತವೆ. ಆದ್ದರಿಂದ. ನಾಗರೀಕರು ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಹೇಳಿದರು.
ಇಂದು ತಮ್ಮ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಮಲೇರಿಯಾ, ಚಿಕುನನ್ ಗುನ್ಯಾ, ಮೆದುಳುಜ್ವರ ಮತ್ತು ಡೆಂಗ್ಯೂ ಈ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಡೆಂಗ್ಯೂ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು,ರಥಯಾತ್ರೆಯು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಎರಡು ದಿನಗಳ ಕಾಲ ಸಂಚರಿಸಿ ಈ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಬಿ.ಎಂ. ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಭಾಗದ ಜನರು ಮನೆ ಮುಂದೆ ಇರುವ ನೀರಿನ ತೊಟ್ಟಿಗಳಿಂದ ನೀರು ಸೋರಿಕೆಯಾಗಿ ನಿಲ್ಲದಂತೆ, ಡ್ರಮ್ಗಳಿಗೆ ಮುಚ್ಚಳವನ್ನು ಹಾಕಬೇಕು, ಒಡೆದ ತೆಂಗಿನ ಚಿಪ್ಪುಗಳು, ಒಡೆದ ಬಕೆಟ್, ಪ್ಲಾಸ್ಟಿಕ್ ಕಪ್ಗಳಲ್ಲಿ ನೀರು ನಿಲ್ಲದ ರೀತಿಯಲ್ಲಿ ಕ್ರಮ ವಹಿಸಬೇಕು. ನಗರ ಪ್ರದೇಶಗಳಲ್ಲಿ ಮನೆಯಂಗಳದ ಹೂವಿನ ಕುಂಡಗಳ ತಟ್ಟೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಸೊಳ್ಳೆಗಳು ಉತ್ಪತಿಯಾಗುತ್ತವೆ ಎಂದರು. ಆದ್ದರಿಂದ ಈ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬೇಕಾದರೆ, ಮನೆಯಲ್ಲಿ ಸೊಳ್ಳೆ ನಿರೋಧಕಗಳನ್ನು ಮತ್ತು ಸೊಳ್ಳೆ ಪರದೆಯನ್ನು ಬಳಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೈಲೆನ್ಸ್ ಅಧಿಕಾರಿ ಡಾ; ಮೋಹನ್ದಾಸ್ ಸಿಬ್ಬಂದಿಗಳಾದ ಪುಟ್ಟಯ್ಯ, ನಾಗೇಶ್, ಸತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.