ಜು.4: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರನ್ನು ನೇಮಿಸುವಂತೆ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.
ಹೊಸ ಸರಕಾರ ಮಂತ್ರಿ ಮಂಡಲ ರಚನೆಯಾಗಿದ್ದು, ಇಲ್ಲಿಯವರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದ ಈ ಭಾಗದ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಈ ಹಿಂದೆಯೂ ಕೂಡಾ ಸುಮಾರು 10 ವರ್ಷಗಳಿಂದ ಬಂದ ಅನುದಾನ ಸರಿಯಾದ ರೀತಿಯಲ್ಲಿ ಭಾಗದ ಅಭಿವೃದ್ಧಿಗೆ ಬಳಕೆಯಾಗಿಲ್ಲ.
ಈ ನಿಟ್ಟಿನಲ್ಲಿ ಇಲ್ಲಿ ಹಲವಾರು ಕಾಮಗಾರಿಗಳು ಹಾಗೂ ಅಭಿವೃದ್ಧಿ ಯೋಜನೆಗಳು ಜಾರಿಯಾಗಬೇಕಾಗಿದ್ದು, ಜೊತೆಗೆ ಸರಕಾರದಿಂದ ಸಿಗುವ ಅನುದಾನಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಕೇವಲ ವ್ಯವಸ್ಥಿತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೆ ತರಬೇಕಾಗಿದ್ದು, ಅದಕ್ಕೆ ಒಬ್ಬ ದಕ್ಷ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಗತ್ಯವಿದೆ.
ಸದ್ಯ ಸರಕಾರವು ಬಹುಮತದ ಸರಕಾರವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದವರಾದ ಡಾ. ಅಜಯ್ ಸಿಂಗ್ ಅವರು ಒಬ್ಬ ನಿಷ್ಠಾವಂತ ಹಾಗೂ ದಕ್ಷ ರಾಜಕಾರಣಿಗಳಾಗಿದ್ದು, ಈ ಭಾಗದ ಎಲ್ಲ ಕುಂದುಕೊರತೆಗಳ ಬಗ್ಗೆ ಬಲ್ಲವರಾಗಿದ್ದು, ಅಲ್ಲದೇ ಇವರಿಗೆ ಇಲ್ಲಿಯತನಕ ಸರಕಾರದಿಂದ ಯಾವುದೇ ಒಂದು ಹುದ್ದೆ, ಸಚಿವ ಸ್ಥಾನ, ನಿಗಮ ಮಂಡಳ ಸ್ಥಾನ ನೀಡಿಲ್ಲ. ಈ ಭಾಗದ ಅಭಿವೃದ್ಧಿಗೋಸ್ಕರ, ಸಮಸ್ತ ಜನರ ಅನೂಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ದೇವೇಂದ್ರ ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.