ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ.27: ತಾಲೂಕಿನ ನಂದಗುಡಿ ಹೋಬಳಿಯ ದಳಸಗೆರೆ ಗ್ರಾಮದಲ್ಲಿ ಕಿಡಿಗೇಡಿಗಳು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳೆದಿದ್ದು, ದಲಿತ ಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಮಧ್ಯ ಭಾಗದಲ್ಲಿರುವ ಅಂಬೇಡ್ಕರ್ ಅವರ ಭಾವಚಿತ್ರವುಳ್ಳ ಫಲಕಕ್ಕೆ ಮೂರು ಕಡೆ ಸಗಣಿ ಬಳೆದಿದ್ದು, ಬೆಳಿಗ್ಗೆ ಕಂಡಂತಹ ದಲಿತ ಸಮುದಾಯದ ಮುಖಂಡರು ನಂದಗುಡಿ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿ, ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ದೊಡ್ಡಹರಳಗೆರೆ ನಾಗೇಶ್ ಮಾತನಾಡಿ ಸಂವಿಧಾನ ರಚಿಸಿ ಬದುಕುವ ಹಕ್ಕನ್ನು ಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವ ಧರ್ಮಕ್ಕೂ ಸಲ್ಲುವ ವ್ಯಕ್ತಿ. ಆದರೆ, ತಾಲೂಕಿನಲ್ಲಿ ಮೇಲಿಂದ ಮೇಲೆ ಅಂಬೇಡ್ಕರ್ ಪ್ರತಿಮೆಗೆ ಬೆಂಕಿ ಹಚ್ಚುವುದು, ಸಗಣಿ
ಬಳಿಯುವ ಪ್ರಕರಣಗಳು ನಡೆಯುತ್ತಲೆ ಇವೆ. ಯನಗುಂಟೆ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಬೆಂಕಿ
ಹಚ್ಚಿದ ಪ್ರಕರಣ ಮಾಸುವ ಮುನ್ನವೇ ದಳಸಗೆರೆಯಲ್ಲಿ ಕಿಡಿಗೇಡಿಗಳು ಸಗಣಿ ಹಾಕಿರುವುದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ. ಆದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಮಾತನಾಡಿ ಅಂಬೇಡ್ಕರ್ ಪ್ರತಿಮೆ, ಭಾವಚಿತ್ರ ಅಷ್ಟೇ ಅಲ್ಲದೆ ದಲಿತರ ಮೇಲೆ ದೌರ್ಜನ್ಯ ಮಾಡುವ ಪ್ರಕರಣಗಳು ಸಹ ತಾಲೂಕಿನಲ್ಲಿ ಹೆಚ್ಚಾಗಿದ್ದು ದಲಿತರಿಗೆ
ರಕ್ಷಣೆ ಇಲ್ಲದಂತಾಗಿದೆ. ಹಲವಾರು ಹೋರಾಟಗಳನ್ನು ಮಾಡಿದರೂ ಸಹ ಪೊಲೀಸರು ಸಹ ನ್ಯಾಯ ಧಕ್ಕಿಸುವ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಹಾಕಿರುವವರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದರೆ ಹೋರಾಟ ರೂಪಿಸಲಾಗವುದು ಎಂದರು.
ಎಸ್ಪಿ ಭೇಟಿ:
ದಳಸಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಹಾಕಿದ ಪ್ರಕರಣ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ವಿಜಯ್ ಕುಮಾರ್ ಹಾಗೂ ಡಿವೈಎಸ್ಪಿ ಶಂಕರ್ಗೌಡ ಪಾಟೀಲ್ ಸಮೇತವಾಗಿ ಭೇಟಿ ನೀಡಿ ಪರಿಶೀಲಿಸಿದರು. ದಲಿತಪರ ಮುಖಂಡರ ಮನವಿಯನ್ನು ಸ್ವೀಕಾರ ಮಾಡಿದರು. ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಮುನಿರಾಜು, ಸಿಪಿಐ ದಿವಾಕರ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ತನಿಖೆಗೆ ಸಹಕಾರ ನೀಡಿ
ದಳಸಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಹಾಕಿರುವ ಬಗ್ಗೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಲಾಗುವುದು. ಗ್ರಾಮಸ್ಥರು ತನಿಖೆಗೆ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಎಸ್ಪಿ ಮಲ್ಲಿಕಾ
ರ್ಜುನ ಬಾಲದಂಡಿ ತಿಳಿಸಿದರು.