ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 13 : ಅಣ್ಣಮ್ಮದೇವಿ, ದೊಡ್ಡಮ್ಮದೇವಿ ಸೇವಾ ಸಮಿತಿ ವತಿಯಿಂದ 25ನೇ ವರ್ಷದ ಬೆಳ್ಳಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ದೇವನಹಳ್ಳಿಯ ಹಳೆ ಪುರಸಭೆ ಆವರಣದಲ್ಲಿ, ಅಣ್ಣಮ್ಮದೇವಿ, ದೊಡ್ಡಮ್ಮದೇವಿ ಸೇರಿದಂತೆ 8 ದೇವರುಗಳನ್ನು ಪ್ರತಿವರ್ಷ ಆಷಾಡ ಮಾಸದಲ್ಲಿ ಪ್ರತಿಷ್ಠಾಪಿಸಿ 6 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಗುರುವಾರ 8 ದೇವರುಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ದೇವರ ಉತ್ಸವ ನಡೆಸಲಾಯಿತು. ತಮಟೆ, ಮಂಗಳವಾದ್ಯ, ಬಾಣಬಿರುಸು, ಆರ್ಕೆಸ್ಟ್ರಾ ಮೂಲಕ ಮೆರವಣಿಗೆ ಸಾಗಿದವು.
ಮೆರವಣಿಗೆ ಬರುವ ಬೀದಿಗಳಲ್ಲಿ ಹೆಂಗಳೆಯರು ರಸ್ತೆಯನ್ನು ಶುಭ್ರಗೊಳಿಸಿ ಬಣ್ಣಬಣ್ಣದ ರಂಗವಲ್ಲಿಗಳನ್ನು ಹಾಕಿ ದೇವರುಗಳಿಗೆ ಅದ್ದೂರಿ ಸ್ವಾಗತ ಕೋರಿದರು. ದೇವರುಗಳಿಗೆ ಮಾಡಿರುವ ವಿಶೇಷ ಅಲಂಕಾರವನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು.
ಇದೆ ವೇಳೆ ಪುರಸಭೆ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ವಿ.ಗೋಪಾಲ್, ಮುಖಂಡರಾದ ಮುನಿರಾಜು, ರಾಮಣ್ಣ ಮುಂತಾದವರು ಇದ್ದರು.