ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಏ.06:ದೇವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಕ್ಕೆ ಇಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಒಟ್ಟು16 ಕೊಠಡಿಗಳಲ್ಲಿ 348 ವಿದ್ಯಾರ್ಥಿಗಳು ದ್ವಿತೀಯ ಭಾಷೆ ಇಂಗ್ಲೀಷ್ ಪರೀಕ್ಷೆ ಬರೆಯುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳೂ ಹಾಜರಿದ್ದು, ಪ್ರತಿ ಕೊಠಡಿಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಗಾಳಿ ಬೆಳಕಿನ ವ್ಯವಸ್ಥೆ, ಆಸನಗಳ ವ್ಯವಸ್ಥೆ ಪರಿಶೀಲಿಸಿದರು. ನೆಲ ಮಹಡಿಯಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ತೆರೆಯಲಾಗಿದ್ದ ಕೊಠಡಿಗೂ ಭೇಟಿ ನೀಡಿ ಹಾಜರಿದ್ದ 4 ವಿಕಲಚೇತನ ವಿದ್ಯಾರ್ಥಿಗಳನ್ನು ಸೂಕ್ತ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.
ಪರೀಕ್ಷಾ ಕೇಂದ್ರದದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸಿಸಿಟಿವಿ ಕ್ಯಾಮೆರ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ಪರೀಕ್ಷೆಯು ಶಿಸ್ತು ಮತ್ತು ಸುವ್ಯವಸ್ಥಿತವಾಗಿ ನಡೆಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ 58 ಪರೀಕ್ಷಾ ಕೇಂದ್ರಗಳಿಂದ ಒಟ್ಟು 13695 ವಿದ್ಯಾರ್ಥಿಗಳು ದ್ವೀತೀಯ ಭಾಷೆ ವಿಷಯ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ಈ ಪೈಕಿ ಖಾಸಗಿ ಕೇಂದ್ರದಲ್ಲಿ 246ಕ್ಕೆ 29 ಮತ್ತು ಸಾಮಾನ್ಯ ಕೇಂದ್ರಗಳಿಂದ 13449ಕ್ಕೆ 29 ಒಟ್ಟು 58 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಒಟ್ಟಾರೆ 13637 ವಿದ್ಯಾರ್ಥಿಗಳು ಹಾಜರಿದ್ದರು. ಜಿಲ್ಲೆಯೆಲ್ಲೆಡೆ ಶಾಂತಿಯುತವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಕಾರ್ಯ ನಡೆದಿದ್ದು ಎಲ್ಲಿಯೂ ಪರೀಕ್ಷಾ ಅವ್ಯವಹಾರವಾಗಿಲ್ಲ.