ಸುದ್ದಿಮೂಲ ವಾರ್ತೆ
ಜು,29:ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯು ಜೈವಿಕ ತಂತ್ರಜ್ಞಾನ ನೀತಿಯನ್ನು ಅಳವಡಿಸಿಕೊಂಡಿದ್ದು, ಈಗ ಮುಂದುವರೆದ ತಂತ್ರಜ್ಞಾನವಾಗಿ ಅಭಿವೃದ್ಧಿಗೊಂಡಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಮೂಲಕ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸುವಲ್ಲಿ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದರು. ಜೈವಿಕ ಬದಾಲಾವಣೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಸಾಧ್ಯತೆಗಳ ಬಗ್ಗೆ ಸೆಂಟರ್ ಆಫ್ ಎಕ್ಸಲೆನ್ಸ್ ನೆರವನ್ನೂ ಪಡೆಯಲಾಗುವುದು ಎಂದು ಹೇಳಿದ ಸಚಿವರು ಸಾರ್ವಜನಿಕರಲ್ಲಿ ಅರಿವು ಮೂಡಿಸ ಬೇಕಾದ ಅವಶ್ಯಕತೆಯಿದೆ ಎಂದೂ ಹೇಳಿದರು.
ಅವರು ಇಂದು (ಜುಲೈ 29) ನಗರದ ರಾಡಿಸನ್ ಬ್ಲೂ ಏಟ್ರಿಯಾ ಹೋಟೆಲಿನಲ್ಲಿ ಏಟ್ರಿಯಾ ವಿಶ್ವವಿದ್ಯಾಲಯದ ಉತ್ಕೃಷ್ಟತೆಯ ಕೇಂದ್ರ ಮತ್ತು ಸ್ವಿಸ್ನೆಕ್ಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಜೀವವೈವಿಧ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ನಿರೀಕ್ಷೆ ಇರುವ ಡಿಜಿಟಲ್ ತಂತ್ರಜ್ಞಾನದ ಮೂಲಕ ಜೀವ ವೈವಿಧ್ಯ ಸಂರಕ್ಷಣೆಗಾಗಿ ರೂಪಿಸಲಾಗಿರುವ ಜಾಗತಿಕ ಮುಕ್ತ ವೇದಿಕೆಯ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.
ವಿಶ್ವದಲ್ಲಿ ಇಂದಿನ ಪರಿಸರ ಅವನತಿಯನ್ನು ಎದುರಿಸಲು ಶಿಕ್ಷಣ, ಉದ್ಯಮ ಮತ್ತು ಸಂರಕ್ಷಣೆಯ ಮಧ್ಯಸ್ಥಗಾರರನ್ನು ಏಕೀಕೃತವಾಗಿ ಒಳಪಡಿಸುವ ನಿರ್ಣಾಯಕ ಅಗತ್ಯವಿದೆ ಎಂದು ಪ್ರಿಯಾಂಕ್ ಖರ್ಗೆ ಒತ್ತಿ ಹೇಳಿದರು. ಸುಸ್ಥಿರ ಬೆಳವಣಿಗೆ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ರೂಪಿಸುವಲ್ಲಿ ದೇಶದ ಐಟಿ ರಾಜಧಾನಿಯಾದ ಬೆಂಗಳೂರು ಮತ್ತು ಕರ್ನಾಟಕ ಮುಂದಾಳತ್ವ ವಹಿಸಬೇಕಾದ ಅವಶ್ಯಕತೆಯಿದೆ ಎಂದೂ ಪ್ರಿಯಾಂಕ್ ಖರ್ಗೆ ಹೇಳಿದರು.
ಪರಿಸರ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸಲು ಅವರ ಸಚಿವರು ಏಟ್ರಿಯಾ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದರು. ಸ್ವಿಸ್ನೆಕ್ಸ್ ಮತ್ತು ಕರ್ನಾಟಕ ವಾಣಿಜ್ಯ ಮಂಡಳಿಯಂತಹ ಸಂಸ್ಥೆಗಳೊಂದಿಗೆ ಮೂಲ ವೇದಿಕೆಯನ್ನು ಅಭಿವೃದ್ಧಿಪಡಿಸಿಕೊಳ್ಳುವಂತೆ ಖರ್ಗೆ ಸಲಹೆ ಮಾಡಿದರು. ಈ ಸಮ್ಮೇಳನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಭಾಷಣವು ಮಾನವಕುಲ ಮತ್ತು ಪರಿಸರ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಹೊಸ ಆಶಯಗಳನ್ನು ಹುಟ್ಟು ಹಾಕಿತು.
ಸ್ವಿಜರ್ ಲ್ಯಾಂಡ್ ಮತ್ತು ವಿಶ್ವದ ಶಿಕ್ಷಣವನ್ನು ಸಂರ್ಕಿಸುವ ಸಂಸ್ಥೆಯಾದ ಸ್ವಿಸ್ನೆಕ್ಸ್ ಸಂಸ್ಥೆಯ ಜೊತೆಗೂಡಿ ಏಟ್ರಿಯಾ ವಿಶ್ವವಿದ್ಯಾಲಯ ದೇಶದಲ್ಲಿಯೇ ಪ್ರಥಮ ಬಾರಿಗೆ ಜೀವವೈವಿಧ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ನಿರೀಕ್ಷೆಯಿರಿಸಿಕೊಂಡು ಮೊದಲ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು. ಜಿ 20 ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಶ್ವದ ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದ ರಾಜ್ಯಧಾನಿ ಏಷ್ಯಾದ ಸಿಲಿಕಾನ್ ಸಿಟಿ ಎಂದೇ ಪ್ರಸಿದ್ದವಾಗಿರುವ ಬೆಂಗಳೂರಿನಲ್ಲಿ ಈ ಅಂತಾರಾಷ್ಟ್ರೀಯ ಸಮ್ಮೇಳನ ಸಜ್ಜುಗೊಳಿಸಿರುವುದು ವಿಶೇಷವಾಗಿದೆ.
ಈ ವೇದಿಕೆಯು ವಿಶ್ವದ ನಾನಾ ರಾಷ್ಟ್ರಗಳ ನಡುವೆ ಸಹಕಾರವನ್ನು ಬೆಳೆಸಲು ಮತ್ತು ಜೀವವೈವಿಧ್ಯ ಸಂರಕ್ಷಣೆಯ ನಿರ್ಣಾಯಕ ಸಮಸ್ಯೆಗಳನ್ನು ಎದುರಿಸಲು ಅನನ್ಯ ಅವಕಾಶವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬರಿಗೂ ಮುಕ್ತವಾಗಿರುವ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಜೀವ ವೈವಿಧ್ಯ ರಕ್ಷಣೆಯನ್ನು ಸುಲಭಗೊಳಿಸುವುದೇ ಅಲ್ಲದೆ, ಹವಾಮಾನ ಬದಲಾವಣೆ ತಗ್ಗಿಸುವಿಕೆಗೆ ಕೊಡುಗೆ ಮತ್ತು ಮಾನವ ಮತ್ತು ಮಾನವೇತರ ಜೀವಿಗಳ ನಡುವೆ ಸಂಘರ್ಷವನ್ನು ಪರಿಹರಿಸುವ ಗುರಿಯನ್ನು ಈ ಸಮ್ಮೇಳನದ ಆಶಯವಾಗಿತ್ತು .
ನೀತಿ ಸಂಸ್ಥೆಗಳು, ಪರಿಸರ ತಜ್ಞರು, ಹೆಸರಾಂತ ವಿಜ್ಞಾನಿಗಳು ಮತ್ತು ರಾಜತಾಂತ್ರಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ವ್ಯಕ್ತಿಗಳು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿ ಈ ಅಂತಾರಾಷ್ಟ್ರೀಯ ಮಹತ್ವದ ವಿಷಯದ ಬಗ್ಗೆ ಚರ್ಚಿಸಿದ್ದು ಒಂದು ವಿಶೇಷವಾಗಿತ್ತು.