ಸುದ್ದಿಮೂಲ ವಾರ್ತೆ
ಕುಷ್ಟಗಿ, ಆ.26:ಸುಮಾರು 15 ವರ್ಷಗಳಿಂದ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಕಲ್ಮಠದ ಶ್ರೀಗುರು ಚನ್ನಬಸವೇಶ್ವರ ಜಾತ್ರಾ ಮಹೋತ್ಸವವನ್ನು ಪುನರ್ ವೈಭವದಿಂದ ಆಚರಿಸಲು ಶ್ರೀಮಠದ ಭಕ್ತರು ತೀರ್ಮಾನಿಸಿದ್ದಾರೆ.
ಸ್ಥಳೀಯ ಕಲ್ಮಠದಲ್ಲಿ ನಿಡಶೇಸಿ ವ ಗೆಜ್ಜೆಬಾವಿ ಹಿರೇಮಠದ ಪೀಠಾಧಿಪತಿ ಅಭಿನವ ಚೆನ್ನಬಸವೇಶ್ವರ ಸ್ವಾಮೀಜಿ ಹಾಗೂ ಮರಿದೇವರಾದ ವಿಶ್ವಾರಾಧ್ಯ ಶ್ರೀಗಳ ಸಾನ್ನಿಧ್ಯದಲ್ಲಿ
ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಪ್ರಮುಖರು ಮಾತನಾಡಿ, ಸ್ಥಳೀಯ ಕಲ್ಮಠದಲ್ಲಿ ಸುಮಾರು 75 ವರ್ಷಗಳ ಕಾಲ ನಿರಂತರ ಪುರಾಣ ಪ್ರವಚನದೊಂದಿಗೆ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿತ್ತು. ಮತ್ತೆ ಆ ವೈಭವ ಮರುಕಳಿಸಲು ವಿಶ್ವಾರಾಧ್ಯ ಶ್ರೀಗಳು ಉತ್ಸುಕರಾಗಿದ್ದಾರೆ. ಸರ್ವರೂ ಶ್ರೀಗಳ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಶ್ರೀಮಠದ ಭಕ್ತರಲ್ಲಿ ಮನವಿ ಮಾಡಿದರು.
ಪ್ರವಚನ, ಅಡ್ಡಪಲ್ಲಕ್ಕಿ ಉತ್ಸವ: ಸೆ.15ರಂದು ಕಲ್ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ವಿಶ್ವಾರಾಧ್ಯ ಶ್ರೀಗಳಿಂದ
ಸೆ.5ರಿಂದ 15ರ ವರೆಗೆ ಶ್ರೀ ಚನ್ನಬಸವ ಶಿವಯೋಗಿಗಳ ಪ್ರವಚನ ಹಾಗೂ ಕೊನೆಯ ದಿನ ಸೆ.15ರಂದು ಶ್ರೀಗುರು ಚನ್ನಬಸವೇಶ್ವರ ಶಿವಯೋಗಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಈ ವೇಳೆ ಪುರಾಣ ಪ್ರವಚನ ಕಾರ್ಯಕ್ರಮದ ಉಸ್ತುವಾರಿ ವಹಿಸಲು ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ದೇವೇಂದ್ರಪ್ಪ ಬಳೂಟಗಿ, ಉಪಾಧ್ಯಕ್ಷರಾಗಿ ಮಹಾಂತಯ್ಯ ಹಿರೇಮಠ, ಕೋಶಾಧ್ಯಕ್ಷರಾಗಿ ರವಿಕುಮಾರ ಹಿರೇಮಠ ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರನ್ನು ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಯಿತು. ಅಲ್ಲದೇ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಪ್ರತಿನಿತ್ಯ ಅನ್ನಪ್ರಸಾದ ವ್ಯವಸ್ಥೆ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕುಷ್ಟಗಿ ಪಟ್ಟಣ ಸೇರಿದಂತೆ ನಿಡಶೇಸಿ, ಕೊರಡಕೇರಿ, ಬೆಂಚಮಟ್ಟಿ, ಬ್ಯಾಲಿಹಾಳ, ಮದಲಗಟ್ಟಿ, ಶಾಖಾಪೂರು ಸೇರಿದಂತೆ ವಿವಿಧ ಗ್ರಮಗಳ ಭಕ್ತರು ಪಾಲ್ಗೊಂಡಿದ್ದರು.