ಸುದ್ದಿಮೂಲ ವಾರ್ತೆ
ಮೈಸೂರು, ಆ.30: ರಾಜರ ನಾಡು ಮೈಸೂರಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಅದ್ದೂರಿಯಾಗಿ ಬುಧವಾರ ಚಾಲನೆ ನೀಡಲಾಯಿತು. ರಕ್ಷಾಬಂಧನ್ ಹಬ್ಬದಂದು ರಾಜ್ಯದ 1.10 ಕೋಟಿ ಮನೆಗಳ ಯಜಮಾನಿಯರ ಖಾತೆಗೆ ಧನಲಕ್ಷ್ಮೀ ಜಮೆಯಾದಳು.
ಮಹಾರಾಜ ಕಾಲೇಜು ಮೈದಾನದಲ್ಲಿ ತುಂಬೆಲ್ಲಾ ಮಹಿಳೆಯರದ್ದೇ ಪಾರುಪತ್ಯ. ಎಲ್ಲಿ ನೋಡಿದರೂ ಮಹಿಳಾಮಣಿಯರೇ ಹೀಗೆ ಅಪಾರ ಮಹಿಳೆಯರ ಸಮಕ್ಷಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ ನೀಡಿದರು.
ಈ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ನಾರಿಯರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಒಟ್ಟಾರೆ ರಾಜ್ಯದ ಹಲವೆಡೆಗಳಿಂದ ಬಂದಿದ್ದ ಸಾಗರೋಪಾದಿಯಲ್ಲಿ ಬಂದಿದ್ದ ನಾರಿಯರು ಮತ್ತು ಮಹಿಳೆಯರು ಚಾರಿತ್ರಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವೇದಿಕೆ ಕಾರ್ಯಕ್ರಮ ನಿಗದಿಯಂತೆ 11.30 ಕ್ಕೆ ಆರಂಭವಾಗಬೇಕಿತ್ತು. ಆದರೆ ಶುರುವಾಗಿದ್ದು ಅಪರಾಹ್ನ 12.42 ಕ್ಕೆ ವಿಳಂಬವಾಗಿ ಬಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮತ್ತೆ ಬೇರೆ ಕಡೆ ಹೋಗಬೇಕಾದಿದ್ದ ಕಾರಣ ಕಾರ್ಯಕ್ರಮವನ್ನು ಆತುರವಾಗಿಯೇ ಮುಗಿಸಲಾಯಿತು. ವೇದಿಕೆ ಮುಂದೆ ಎಷ್ಟು ಜನರಿದ್ದರೂ ಅಷ್ಟೇ ಸಂಖ್ಯೆಯ ಜನರು ಹೊರಗೆ ಹೊರಗಿದ್ದರು. ಆಸನಗಳು ಅಗತ್ಯ ಸಂಖ್ಯೆಯಲ್ಲಿ ಇರಲಿಲ್ಲ. ಕೂರಲು ಹರಸಾಹಸ ಪಡಬೇಕಾಯಿತು.
ಬೆಳಗ್ಗೆ 10ಕ್ಕೇನೆ ಮಹಾರಾಜ ಮೈದಾನದಲ್ಲಿಲ್ಲಿ ಮಹಿಳಾ ಜನಸ್ತೋಮವೇ ತುಂಬಿ ತುಳುಕುತ್ತಿತ್ತು. ಪಿಂಕ್ ಬಣ್ಣದ ಧಿರಿಸಿನಲ್ಲಿ ಸಮಾವೇಶದ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ಮಹಿಳೆಯರು ಕಂಗೊಳಿಸಿದರು. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳಿಂದ ಹೆಚ್ಚು ಮಂದಿ ಬಂದಿದ್ದರು.
ಕಾಂಗ್ರೆಸ್ ನೇತಾರ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು. ಡಿಜಿಟಲ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರಿಗೆ ಮುಖಂಡರು ಸನ್ಮಾನಿಸಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ,ಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರಾದ ಡಾ.ಜಿ. ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಚಲುವರಾಯಸ್ವಾಮಿ, ಡಾ.ಎಚ್.ಸಿ. ಮಹದೇವಪ್ಪ, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ಎನ್.ಎಸ್. ಬೋಸರಾಜು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತಿತರರು ಹಾಜರಿದ್ದರು.