ಸುದ್ದಿಮೂಲ ವಾರ್ತೆ
ಚಿಂತಾಮಣಿ, ಅ. 30 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರು ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಸರ್ಕಾರದ ಆದೇಶಗಳು ಹಾಗೂ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ತಾಲೂಕಿನ ಕಾಗತಿ ಬಳಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಮುಂಭಾಗ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕರಾದ ಕೋಡಿಗಲ್ ರಮೇಶ್, ತಾಲೂಕಿನ 16 ವಿದ್ಯಾರ್ಥಿ ನಿಲಯಗಳಿಗೆ ನಿಗದಿತ ಅವಧಿಯಲ್ಲಿ ಆಹಾರ ಪದಾರ್ಥಗಳು ಸಾಂಬಾರ್ ಪದಾರ್ಥಗಳು, ತರಕಾರಿ ಮತ್ತು ಸ್ವಚ್ಛತೆ ಸಾಮಗ್ರಿಗಳನ್ನು ಸರಬರಾಜು ಮಾಡದೆ ಟೆಂಡರ್ ಸಂಸ್ಥೆಗಳ ಹತ್ತಿರ ಶೇಕಡ 5 ರಿಂದ 10 ರಷ್ಟು ಪರ್ಸೆಂಟೇಜ್ ಅನ್ನು ಅಕ್ರಮವಾಗಿ ಅಧಿಕಾರಿಗಳು ಪಡೆದುಕೊಂಡು ಟೆಂಡರ್ ನಲ್ಲಿ ತಿಳಿಸಿರುವ ಷರತ್ತುಗಳಿಗೆ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರು ಅಧಿಕಾರಿಗಳು ಮತ್ತು ಗುತ್ತಿಗೆ ಸಂಸ್ಥೆಗಳ ಭ್ರಷ್ಟಾಚಾರ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮ ವಹಿಸಬೇಕು.
ಹಲವು ಹಾಸ್ಟಲ್ ಗಳಲ್ಲಿ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಅಹಾರ ಪದಾರ್ಥಗಳನ್ನು ನೀಡದೆ ಹಾಸ್ಟೆಲ್ ನಲ್ಲಿ ಕೆಲಸ ನಿರ್ವಹಿಸುವ ವಾರ್ಡನ್ ಗಳೇ ಮಾಯ ಮಾಡುತ್ತಿದ್ದಾರೆ. ಒಬ್ಬ ವಾರ್ಡನ್ ಎರಡರಿಂದ ನಾಲ್ಕು ಹಾಸ್ಟೆಲ್ ಗಳಲ್ಲಿ ಕೆಲಸ ನಿರ್ವಹಿಸಿ ಹಾಸ್ಟೆಲ್ ಗಳ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.
ಹಾಸ್ಟೆಲ್ ಗಳಲ್ಲಿ ಹಾಗೂ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದರು ಮೇಲಾಧಿಕಾರಿಗಳಿಗೆ ಗೊತ್ತಿದ್ದರೂ ಗೊತ್ತಿಲ್ಲದಂತೆ ನಾಟಕವಾಡುತ್ತಿದ್ದಾರೆ. ಈ ಕೂಡಲೇ ಸರ್ಕಾರ ಹಾಗೂ ಮೇಲಾಧಿಕಾರಿಗಳು ಹಾಸ್ಟೆಲ್ ಗಳಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಅಂಜಿ, ಎಂ.ಎನ್ ಶ್ರೀನಿವಾಸ್, ಎನ್. ನಾರಾಯಣಸ್ವಾಮಿ, ವೈ ವಿ ಶ್ರೀನಿವಾಸ್ ಇದ್ದರು.