ಸುದ್ದಿಮೂಲ ವಾರ್ತೆ
ತುಮಕೂರು, ಜೂನ್ 13 : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 139 ಸ್ಕ್ಯಾನಿಂಗ್ ಸೆಂಟರ್ಗಳು ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಗಳ ರೀತ್ಯ ಕಾರ್ಯನಿರ್ವಹಿಸಬೇಕು. ಕಾಯ್ದೆ ಉಲ್ಲಂಘಿಸುವ ಕೇಂದ್ರಗಳ ಪರವಾನಗಿ ರದ್ದುಪಡಿಸಿ ಮುಚ್ಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಡಿ.ಎನ್. ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ತಂತ್ರವಿಧಾನಗಳ ನಿಷೇಧ ಕಾಯ್ದೆ ಅನುಷ್ಠಾನದ ಕುರಿತು ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪುರುಷ ಹಾಗೂ ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಕ್ಯಾನಿಂಗ್ ಕೇಂದ್ರದವರು ಸ್ಕ್ಯಾನಿಂಗ್ ಯಂತ್ರ ಖರೀದಿಸುವ ಪೂರ್ವದಲ್ಲಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಖರೀದಿಸಿದ ನಂತರ ಯಂತ್ರಗಳ ಅನುಸ್ಥಾಪನೆ ಮಾಡುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯ. ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ಡೆ ಕಾನೂನನ್ನು ಅನುಷ್ಠಾನಗೊಳಿಸದೆ ಇರುವುದು ಶಿಕ್ಷಾರ್ಹ ಅಪರಾಧವಾಗಿದೆ, ಅಧಿಕಾರಿಗಳು ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸಂಸ್ಥೆಗಳನ್ನು ಭೇಟಿ ಮಾಡಿ ತಪಾಸಣೆ ಹಾಗೂ ಮೇಲ್ವಿಚಾರಣೆ ನಡೆಸಿ, ಕಾಯ್ದೆಯನ್ನು ಅನುಷ್ಠಾನ ಮಾಡದ ಸಂಸ್ಥೆಗಳಿಗೆ ನೊಟೀಸ್ ನೀಡುವಂತೆ ಅವರು ಸೂಚಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷೆ ಡಾ. ರೇಖಾ ಮಾತನಾಡಿ, ಜಾಗತಿಕವಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಗರ್ಭದಲ್ಲಿ ಇರುವ ಮಗು ಗಂಡು ಅಥವಾ ಹೆಣ್ಣು ಎಂದು ಪತ್ತೆ ಹಚ್ಚುವಂತಿಲ್ಲ. ಮಗುವಿನ ಅಂಗವಿಕಲತೆ ಪತ್ತೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಕೆಲವರು ಲಿಂಗ ಪತ್ತೆಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಭ್ರೂಣ ಲಿಂಗ ಪತ್ತೆ ಮಾಡುತ್ತಿರುವ ಬಗ್ಗೆ ಸಾಕ್ಷಾಧಾರಗಳ ಸಹಿತ ದೂರು ನೀಡಿದರೆ ಬಹುಮಾನ ನೀಡಲಾಗುವುದು ಎಂದರು.
ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ.ಲೋಕೆಶ್ ರೆಡ್ಡಿ, ಮಕ್ಕಳ ತಜ್ಞೆ ಡಾ.ಮುಕ್ತಾಂಭ ವಕೀಲರಾದ ಕುಮಾರಸ್ವಾಮಿ ಎಂ.ಎನ್, ಎನ್.ಜಿ.ಒ ರಾಣಿ ಚಂದ್ರಶೇಖರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.