ಸುದ್ದಿಮೂಲ ವಾರ್ತೆ,
ಮೈಸೂರು, ಮೇ 14: ಬಿಜೆಪಿಯ ರಾಷ್ತ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬೀಸಿದ ಖೆಡ್ಡಾಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಬಿದ್ದರಾ? ಇಂತಹ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ದ ಸ್ವಜಾತಿಯ ಸೋಮಣ್ಣ ಅವರನ್ನು ಎತ್ತಿಕಟ್ಟಿ ಆಟ ನೋಡುವ ಬಿ.ಎಲ್.ಸಂತೋಷ್ ಪಡೆಯ ಆಟದ ಭಾಗವಾಗಿಯೇ ಸೋಮಣ್ಣ ಅವರನ್ನು ವರುಣ ಮತ್ತು ಚಾಮರಾಜ ಕ್ಷೇತ್ರಗಳಲ್ಲಿ ನಿಲ್ಲಿಸಿದ್ದು ಎಂಬ ಮಾತು ಕೇಳಿ ಬರುತ್ತಿದೆ.
ಲಿಂಗಾಯತರ ನಾಯಕ ಯಡಿಯೂರಪ್ಪ ಮಾತ್ರವಲ್ಲ, ಸೋಮಣ್ಣ ಕೂಡ ಆ ಸಮುದಾಯದ ನಾಯಕ ಎಂದು ಬಿಂಬಿಸುವ ತಂತ್ರಕ್ಕೆ ಯಡಿಯೂರಪ್ಪ ಅಭಿಮಾನಿ ಪಡೆ ಪ್ರತಿತಂತ್ರ ಹೆಣೆದು, ಯಡಿಯೂರಪ್ಪ ಮತ್ತು ವಿಜಯೇಂದ್ರ ಸೋಮಣ್ಣ ಪರ ಇಲ್ಲ. ಎರಡೂ ಕ್ಷೇತ್ರಗಳಲ್ಲಿ ಅವರನ್ನು ಸೋಲಿಸಲು ತೆರೆ ಮರೆಯಲ್ಲಿ ಸಂದೇಶ ರವಾನಿಸಿದ್ದಾರೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ.
ಅದನ್ನು ಅಲ್ಲಗಳೆಯುವಂತ ‘ಚರ್ಚೆ’ಯನ್ನು ಹುಟ್ಟು ಹಾಕುವಲ್ಲಿ ಸೋಮಣ್ಣ ಪಡೆ ಸೋತಿತು. ವಿಜಯೇಂದ್ರ ಅಭಿಮಾನಿಗಳ ಮೇಲೆ ‘ನಿಗಾ’ ಮಾಡದೇ ಹೋಗಿ ಒಳ ಹೊಡೆತ ಅನುಭವಿಸಿದರು ಎಂಬ ಅಸಮಾಧಾನ ಸೋಮಣ್ಣ ಅಭಿಮಾನಿಗಳಲ್ಲಿ ವ್ಯಕ್ತವಾಗಿದೆ.
ಎತನ್ಮಧ್ಯೆ ವರುಣಾದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯರನ್ನು ಸೋಲಿಸಲೇಬೇಕೆಂದು ವಿ.ಸೋಮಣ್ಣರನ್ನು ಕಣಕ್ಕಿಳಿಸಿದ್ದ ಬಿಜೆಪಿ ನಾಯಕರಿಗೆ ಕೊನೆಗೂ ಮುಖಭಂಗವಾಗಿದೆ.