ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಆ.21 : ಕೃಷಿ ಪಂಪ್ಸೆಟ್ಗಳಿಗೆ ಹಾಗೂ ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಹಸಿರು ಸೇನೆ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ಇಲ್ಲಿನ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತರು ಪ್ರತಿಭಟನಾ ಸ್ಥಳದಲ್ಲೇ ಒಲೆ ಹಚ್ಚಿ ಅಡುಗೆ ಮಾಡಿ ಊಟ ಮಾಡಿದರು, ಅಲ್ಲದೇ, ಬೆಸ್ಕಾಂ ಇಲಾಖೆಯ ಅಧಿಕಾರಿ ಸಿಬ್ಬಂದಿಗೂ ಉಣಬಡಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಇತೀಚೆಗೆ ಕಳೆದ 20 ದಿನಗಳಿಂದಲೂ ವಿದ್ಯುತ್ ಪೂರೈಕೆಯಲ್ಲಿ ಬಹಳ ವ್ಯತ್ಯಾಸವಾಗಿದೆ. ಕೇವಲ ದಾಖಲೆಗಳಲ್ಲಿ ಮಾತ್ರ ಕೃಷಿ ಪಂಪ್ಸೆಟ್ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಆಗಿದೆ ಎಂದು ವರದಿ ಇರುತ್ತದೆ. ವಾಸ್ತವದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ದುರಸ್ತಿ ಇದ್ದಾಗ ತೆಗೆಯುವ ವಿದ್ಯುತ್ ಸಂಪರ್ಕವನ್ನು ಮತ್ತೆ ಕೊಡಬೇಕು ಆದರೆ ಅದನ್ನು ಕೊಡುತ್ತಿಲ್ಲ. ಹಿರಿಯ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಾರೆ. ಆದರೆ, ಸಿಬ್ಬಂದಿಗಳು ಅಧಿಕಾರಿಗಳ ಮಾತನ್ನು ಕೇಳುತ್ತಿಲ್ಲ. ರೈತರು ಕರೆ ಮಾಡಿದರೆ ಕರೆ ಸ್ವೀಕರಿಸೊಲ್ಲ ಎಂದು ದೂರಿದರು.
ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ರೈತರ ಬೆಳೆಗಳು ಒಣಗಿ ನಾಶವಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ರೈತರಿಗೆ ಆಗುವ ನಷ್ಟವನ್ನು ಇಲಾಖೆಯಿಂದಲೇ ಭರಿಸಿಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೃಷಿ ಪಂಪ್ ಸೆಟ್ಗಳಿಗೆ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಪ್ರತಿ ದಿನ ಸಂಜೆ 6 ರಿಂದ 9 ಗಂಟೆಯ ವೇಳೆ ತಪ್ಪದೇ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಚಿಂತಾಮಣಿ ಉಪ ವಿಭಾಗದ ಇಇ ಶೋಭ ಮಾತನಾಡಿ, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಈಗಲೂ ತ್ರಿಫೇಸ್ ವಿದ್ಯುತ್ತನ್ನು ಕೃಷಿ ಪಂಪ್ಸೆಟ್ಗಳಿಗೆ ಪೂರೈಸಲು ಬದ್ದರಾಗಿದ್ದೇವೆ, ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಕಳೆದ ಐದಾರು ದಿನಗಳಿಂದ ಅಡಚಣೆ ಆಗಿರುವ ಬಗ್ಗೆ ವಿವರ ಪಡೆದುಕೊಂಡು ನಂತರ ಸರಿಪಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.