ಸುದ್ದಿಮೂಲ ವಾರ್ತೆ
ಮಧುಗಿರಿ,ನ.28: ಅರ್ಥ ಶಾಸ್ತ್ರಜ್ಞ ಡಿ.ಎಂ.ನಂಜುಡಪ್ಪ ಹಾಗೂ ಹನಗುಂದಿಮಠ್ ಅವರ ಅಧ್ಯಕ್ಷತೆಯ ಸಮಿತಿಗಳು ಸಲ್ಲಿಸಿರುವ ವರದಿಗಳು ಚರ್ಚೆಯಾಗದೇ ಇದ್ದರೆ ವೈಜ್ಞಾನಿಕ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ, ಸಮಾಜದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ ಎಂದು ಜಾಗೃತ ಕರ್ನಾಟಕ ವೇದಿಕೆಯ ಡಾ.ಎಚ್.ವಿ.ವಾಸು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಗೃತ ಕರ್ನಾಟಕದಿಂದ ಆಯೋಜಿಸಿದ್ದ ಹಿಂದುಳಿದ ತಾಲೂಕುಗಳ ಸಮಗ್ರ ಪ್ರಗತಿ ಕರ್ನಾಟಕ ಮಾದರಿ ಮತ್ತು ಜನ ಮಾಧ್ಯಮದ ಪಾತ್ರ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ರಾಜಧಾನಿಗೆ ದೂರವಿರುವ ಗುಲ್ಬರ್ಗ, ರಾಯಚೂರು, ಬೀದರ್ ಹಾಗೂ ಸಮೀಪವಿರುವ ಮಧುಗಿರಿ, ಶಿರಾ, ಪಾವಗಡ ತಾಲ್ಲೂಕುಗಳು ಕೂಡ ಹಿಂದುಳಿದಿವೆ. ಆದರೆ, ರಾಜ್ಯದಲ್ಲಿರುವ ಪ್ರತೀ ತಾಲ್ಲೂಕು ಅಭಿವೃದ್ಧಿ ಆಗುವುದು ಮುಖ್ಯ ಧ್ಯೇಯವಾಗಬೇಕು ಎಂದರು.
ಈಗ ಅಧಿಕಾರಕ್ಕೆ ಬಂದಿರುವ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಹಲವು ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಜನರ ದುಡ್ಡು ಜನರಿಗೇ ಹರಿಯುವಂತೆ ಮಾಡುವ ಒಳ್ಳೆಯ ಕಾರ್ಯಕ್ರಮಗಳು ಇವಾಗಿವೆ. ಈ ಗ್ಯಾರಂಟಿಗಳ ಆಚೆಗೆ ರಾಜ್ಯದ ಯಾವ ಭಾಗ ಹಿಂದುಳಿದಿದೆ, ಯಾವ ಸಮುದಾಯಗಳು ಹಿಂದುಳಿದಿವೆ ಎನ್ನುವ ವಿಚಾರಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡದೇ ಇದ್ದರೆ ನಾವು ಎಲ್ಲಿದ್ದೇವೋ ಅಲ್ಲೇ ಇರುತ್ತೇವೆ. ಮಂತ್ರಿಮಹಾಶಯರು, ಅಧಿಕಾರಿಗಳು ಮಾತ್ರವಲ್ಲದೆ ಜನರು ಕೂಡ ಇದರ ಬಗ್ಗೆ ಮಾತನಾಡಬೇಕು ಹಾಗೂ ಮಾಧ್ಯಮಗಳಲ್ಲಿ ಚರ್ಚೆಯಾಗಬೇಕು. ಸರ್ಕಾರದ ಮೇಲೆ ಒತ್ತಡ ಬೀಳುವ ರೀತಿಯಲ್ಲಿ ಕೆಲಸ ಮಾಡಬೇಕು. ಈ ಬಗ್ಗೆ ಚರ್ಚೆಯಾಗಲೀ ಅಥವಾ ವಿಶೇಷ ಕಾರ್ಯಕ್ರಮಗಳನ್ನಾಗಲೀ ಮಾಧ್ಯಮಗಳು ರೂಪಿಸಿಲ್ಲ. ಜನರ ದನಿಯಾಗಿರುವ ಮಾಧ್ಯಮಗಳು ಇಂತಹ ಕಾರ್ಯಕ್ರಮಗಳನ್ನು ಮಾಡುವ ತುರ್ತಿದೆ ಎಂದರು.
ಯಾವುದನ್ನು ತೋರಿಸಬೇಕು ಮತ್ತು ಯಾವುದನ್ನು ತೋರಿಸಬಾರದು ಎನ್ನುವುದರಲ್ಲಿ ಮಾಧ್ಯಮಗಳಲ್ಲೂ ರಾಜಕಾರಣ ಇದೆ. ಹಾಗಾಗಿ ಡಿ.ಎಂ.ನಂಜುಂಡಪ್ಪ ವರದಿ ಹಾಗೂ ಹನಗುಂದಿಮಠ್ ಅವರ ವರದಿಗಳು ನಮಗೆ ಗೊತ್ತಾಗುತ್ತಿಲ್ಲ. ಈ ವರದಿಗಳ ಬಗ್ಗೆ ನಮಗೆ ಗೊತ್ತಾಗಲಿಲ್ಲ ಎಂದರೆ ಧ್ವನಿ ಎತ್ತುವ ಪ್ರಶ್ನೆಯೇ ಬರುವುದಿಲ್ಲ. ಇಂದು ಮಾಧ್ಯಮಗಳು ಮಾಡುವ ಕೆಲಸವನ್ನು ನಾಗರಿಕರೇ ಮಾಡಬೇಕಿದೆ. ಇದಕ್ಕೆ ಪೂರಕವಾಗಿ ಡಿಜಿಟಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುನೀಂದ್ರ ಕುಮಾರ್, ಉಪನ್ಯಾಸಕ ರಾಮಚಂದ್ರ, ಮಾಧ್ಯಮ ಸಂಯೋಜಕ ಅನಿಲ್ ಕುಮಾರ್ ಚಿಕ್ಕದಾಳವಟ್ಟ,ವಿದ್ಯಾರ್ಥಿ ಮುಖಂಡರಾದ ದಯಾನಂದ್, ಹರೀಶ್, ನವತೇಜ್, ಅಕ್ಷಯ್ ಕುಮಾರ್ ವೇಂಕಟೇಶ್ ನಾಗಲಾಪುರ , ಮಾನವ ಬಂಧುತ್ವ ವೇದಿಕೆಯ ಸಂಯೋಜಕ ರಾಜಣ್ಣ, ಕರವೇ ಶಿವಕುಮಾರ್, ಸೇರಿದಂತೆ ಹಲವರು ಹಾಜರಿದ್ದರು.