ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.18: ಸ್ತ್ರೀ ಸಬಲೀಕರಣಕ್ಕೆ “ಶಕ್ತಿ” ತುಂಬಿದ ಉಚಿತ ಪ್ರಯಾಣ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಇದು ಮಾತೆಯರ ಪಾಲಿನ ಶಾಶ್ವತ ಯೋಜನೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಮುಖ್ಯಸ್ಥ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಮಸ್ತ ಸ್ತ್ರೀ ಸಂಕುಲಕ್ಕೆ ಯೋಜನೆ ಸೌಲಭ್ಯ ಸೌಲಭ್ಯ ಸಿಗಲಿದ್ದು, ನೂಕುನುಗ್ಗಲು ಬೇಡ ಸಾವಧಾನವಾಗಿ ಪ್ರಯಾಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದರೂ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ನೀಡಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವನ್ನು ಅಧಿಕಾರಕ್ಕೆ ಬಂದ ತಿಂಗಳೊಳಗೆ ಈಡೇರಿಸಿದೆ. ಮಹಿಳಾ ಸಬಲೀಕರಣದ ಬಗ್ಗೆ ಹಲವರು ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥ ನೀಡಿದೆ. ಅಕ್ಷರಶಃ ಸ್ತ್ರೀ ಶಕ್ತಿಗೆ ಹೊಸ “ಶಕ್ತಿ”, ಚೈತನ್ಯವನ್ನು ತುಂಬಿದೆ ಎಂದು ದಿನೇಶ್ ಗೂಳಿಗೌಡ ಅಭಿಪ್ರಾಯಪಟ್ಟಿದ್ದಾರೆ.
ಶಕ್ತಿ ಯೋಜನೆಯಿಂದ ಎಲ್ಲ ವರ್ಗದ ಮಹಿಳೆಯರಿಗೆ ಅನುಕೂಲವಾಗಿದೆ. ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗುವವರು. ಮನೆ ಕೆಲಸಕ್ಕೆ ಹೋಗುವವರು, ಮಹಿಳಾ ಪೌರ ಕಾರ್ಮಿಕರು, ವಿದ್ಯಾರ್ಥಿನಿಯರು, ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ತೆರಳುವವರಿಗೆ, ಮಾತ್ರವಲ್ಲ ಧಾರ್ಮಿಕ ಕೇಂದ್ರಗಳಿಗೆ ತೆರಳುವ ಮಹಿಳೆಯರಿಗೆ, ತವರು ಮನೆಗೆ ತೆರಳುವ ತಾಯಂದಿರಿಗೆ, ಯುವತಿಯರು, ಗೃಹಿಣಿಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇಕಡಾ 32ರಷ್ಟು ಹೆಚ್ಚಿದೆ. ಜೂ. 11 ರಂದು ಯೋಜನೆ ಜಾರಿಯಾಗಿದೆ. ಈ ಮೊದಲು ರಾಜ್ಯದ ನಾಲ್ಕು ನಿಗಮಗಳಲ್ಲಿ ಪ್ರತಿ ದಿನ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈಗ 1.10 ಕೋಟಿ ಜನ ಸರಾಸರಿ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರ ಪ್ರಯಾಣವೂ ಹೆಚ್ಚಳವಾಗಿದ್ದು, ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ. ಅಂಕಿ ಅಂಶಗಳು ಯೋಜನೆಯ ಯಶಸ್ಸನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.