ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ,ಅ:14: ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಪಾಳ್ಯಕೆರೆ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮುದ್ದಲಪಲ್ಲಿ ಗ್ರಾಮದಿಂದ ತಾಂಡ ಮೂಲಕ ನಲ್ಲಗುಟ್ಲಪಲ್ಲಿ ರಸ್ತೆ ಸಂಪರ್ಕ ಕಲ್ಪಿಸುವ ಸುಮಾರು ಮೂರು ಕಿಲೋಮೀಟರ್ ಅಂದಾಜು 1.45 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಿನ್ನೆ ಶಾಸಕರಿಂದ ಗುದ್ದಲಿ ಪೂಜೆ ಮಾಡಲಾಗಿತ್ತು. ಆದರೆ, ಈ ಕಾಮಗಾರಿಗೆ ಸಾರ್ವಜನಿಕರಿಂದ ಟೀಕೆ, ಟಿಪ್ಪಣಿಗಳು ಕೇಳಿ ಬಂದಿವೆ.
ನೂರಾರು ವಾಹನಗಳು ಸಂಚರಿಸುವ ರಸ್ತೆಗಳನ್ನು ಬಿಟ್ಟು, ಯಾವ ವಾಹನಗಳು ಓಡಾಡದ ರಸ್ತೆಗೆ ಡಾಂಬರಿಕರಣ ಮಾಡಲು ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಶಾಸಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕೆಲ ಗ್ರಾಮಗಳಿಗೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಡಾಂಬರಿಕರಣ ಕಾಣದ ರಸ್ತೆಗಳು ಹಾಗು ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆಗಳು ಇದ್ದು, ಈ ರಸ್ತೆಗಳು ತೀರ ಹದಗೆಟ್ಟು ಸಂಚಾರ ಮಾಡುವುದಕ್ಕು ಆಗದ ರೀತಿಯಲ್ಲಿ ಇವೆ. ಇಂತಹ ರಸ್ತೆಗಳನ್ನು ಬಿಟ್ಟು ಒಂದು ಬಸ್ಸು ಬೆಳಿಗ್ಗೆ ಹೋಗಿ ಸಾಯಂಕಾಲ ಬರುವ ರಸ್ತೆ ಇದಾಗಿದ್ದು, ಇಂತ ರಸ್ತೆಗಳನ್ನು ಸರಿಪಡಿಸಲು ಮುಂದಾಗಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಚಾಕವೇಲು ರಸ್ತೆ, ಚಾಕವೇಲು ಇಂದ ಮಂಜುನಾಥಪುರ ರಸ್ತೆ, ಚೇಳೂರು ಇಂದ ಪುಲಿಗಲ್ ಕ್ರಾಸ್ ರಸ್ತೆ, ಮೂಗಿರೆಡ್ಡಿಪಲ್ಲಿ ನಿಂದ ಪುಲಿಗಲ್ ರಸ್ತೆ ಇನ್ನು ಹಲವು ರಸ್ತೆಗಳು ಓಡಾಡಲೂ ಸಹ ಆಗದ ರೀತಿ ತೀರ ಹದಗೆಟ್ಟಿದ್ದು ಈ ರಸ್ತೆಗಳು ಡಾಂಬರೀಕರಣ ಕಾಣಿ ದಶಕಗಳೇ ಕಳೆದಿವೆ. ಮೊದಲು ಇಂತಹ ರಸ್ತೆಗಳನ್ನು ಸರಿಪಡಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.
ತುರ್ತು ಸಂಪರ್ಕ ಕಲ್ಪಿಸುವ, ನೂರಾರು ವಾಹನಗಳು ಓಡಾಡುವ ರಸ್ತೆಗಳು ಎಷ್ಟೋ ಕಳಪೆಯಾಗಿಯೇ ಉಳಿದಿದ್ದು, ಶಾಸಕರು ಈ ಸಂಬಂಧ ಮರುಪರಿಶೀಲನೆ ಮಾಡಿ ಸರಿಯಾದ ರಸ್ತೆಗಳಿಗೆ ಸರಿಯಾದ ರೀತಿಯಲ್ಲಿ ಅನುದಾನವನ್ನು ಬಳಕೆ ಮಾಡಲು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.