ಸುದ್ದಿಮೂಲ ವಾರ್ತೆ
ಬೆಂಗಳೂರು ನ13: ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ದ್ರೋಣ್ ಕ್ಯಾಮರಾಗಳ ನಿಗಾ ಹೆಚ್ಚಿಸಿ, ಕೃಪಾಕರ ಸೇನಾನಿ-ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಿ ಎನ್ನುವ ಸೂಚನೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗತ್ಯ ಸಿಬ್ಬಂದಿ, ಅನುದಾನ ಸೇರಿ ಸರ್ಕಾರದಿಂದ ಎಲ್ಲಾ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ವಯಸ್ಸಾದ ಕಾರಣಕ್ಕೆ ಮತ್ತು ಹೊಸ ಯುವ ಹುಲಿಗಳ ದಾಳಿಯಿಂದ ಗಾಯಗೊಂಡ ಹಾಗೂ ಇನ್ನಿತರೆ ಕಾರಣಗಳಿಂದ ಅರಣ್ಯ ಪ್ರದೇಶದಿಂದ ಹೊರಗೆ ಸಂಚರಿಸುತ್ತಿರುವ 15-20 ಹುಲಿಗಳನ್ನು ಡ್ರೋನ್ ಕ್ಯಾಮರಾ ನೆರವಿನಿಂದ ತಕ್ಷಣ ಹಿಡಿಯಲು ಕ್ರಮ ಜರುಗಿಸಿ ಎನ್ನುವ ಸೂಚನೆ ನೀಡಿದರು.
ಈಗಾಗಲೇ ಎಂಟು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಮತ್ತು ಸ್ಕ್ವಾಡ್ ಗಳ ಸಂಖ್ಯೆಯನ್ನು ಸಂಘರ್ಷ ಪೀಡಿತ ಅರಣ್ಯ ಪ್ರದೇಶದಲ್ಲಿ ಬಳಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಈ ಬಗ್ಗೆ ಸಮಗ್ರ ಚರ್ಚೆ ನಡೆಸಿದ ಬಳಿಕ ಸಿದ್ದರಾಮಯ್ಯ, ಮಾನವ ವನ್ಯ ಜೀವಿ ಸಂಘರ್ಷ ನಿಯಂತ್ರಣಕ್ಕೆ ಈ ಕೆಳಗಿನ ಎಂಟು ಅಂಶದ ಕಾರ್ಯಕ್ರಮಕ್ಕೆ ಅಸ್ತು ಎಂದರು.
ಮಾನವ ವನ್ಯಜೀವಿ ಸಂಘರ್ಷ ಇರುವ ಪ್ರದೇಶಗಳನ್ನು ಗುರುತಿಸುವುದು ಮತ್ತೆ ಯಾವ ಸ್ವರೂಪದ ಸಂಘರ್ಷ ಇದೇ ಎಂದು ಪಟ್ಟಿ ಮಾಡುವುದು. ಮಾನವ ಸಂಪನ್ಮೂಲದ ನಿರ್ವಹಣೆ ಸಂಘರ್ಷದ ತೀವ್ರತೆಯ ಆಧಾರದ ಮೇಲೆ ಅಧಿಕಾರಿ, ಸಿಬ್ಬಂದಿಯ ನಿಯೋಜನೆ. ಗಸ್ತು: ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಳ ಮಾಡುವುದು ಹಾಗೂ ರಿಜಿಸ್ಟರ್ ನಿರ್ವಹಣೆ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಅರಣ್ಯದಂಚಿನ, ಅದರಲ್ಲೂ ಮಾನವ ವನ್ಯ ಜೀವಿ ಸಂಘರ್ಷ ಇರುವ ಗ್ರಾಮದಲ್ಲಿ ವಾಸ್ತವ್ಯ ಮಾಡುವುದು.
ಸ್ಥಳೀಯರನ್ನು ತೊಡಗಿಸಿಕೊಳ್ಳುವುದು, ಅರಣ್ಯದಂಚಿನ ಗ್ರಾಮದ ಉತ್ಸಾಹಿ ಯುವಕರು ಮತ್ತು ಹಿರಿಯರನ್ನು ಗುರುತಿಸಿ ಅರಣ್ಯ ಮಿತ್ರ ಎಂದು ಪರಿಗಣಿಸಿ ಗಸ್ತು, ವನ್ಯಜೀವಿ , ಸೆರೆ, ಕಾರ್ಯಾಚರಣೆ ವೇಳೆ ಅವರ ಸೇವೆ ಬಳಸಿಕೊಳ್ಳುವುದು. ವನ್ಯಜೀವಿ ಸಂರಕ್ಷಣೆ ಕಾರ್ಯಾಚರಣೆಗೆ ವನ್ಯಜೀವಿಗಳು ಸಂಚರಿಸುವ ಕಾರ್ಯತಂತ್ರ ಸ್ಥಳಗಳಲ್ಲಿ 24/7 ವಾಹನ ಮತ್ತು ಅರಣ್ಯ ಸಿಬ್ಬಂದಿ ಲಭ್ಯವಾಗುವಂತೆ ಮಾಡುವುದು.
ಅಣಕು ಪ್ರದರ್ಶನ:
ವನ್ಯಜೀವಿ ಸೆರೆ , ವನ್ಯಜೀವಿ ದಾಳಿ ಮಾಡಿದಾಗ ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಲು ಅಣಕು ಪ್ರದರ್ಶನ ಏರ್ಪಡಿಸುವುದು. ಜಿಲ್ಲಾ ಮಟ್ಟದಲ್ಲಿ ಸಮನ್ವಯ/ ಸಹಯೋಗ ಸಮಿತಿ ರಚನೆ, ತಾಲ್ಲೂಕು ಮಟ್ಟದಲ್ಲಿ ಉಪಸಮಿತಿ ರಚನೆ ಮಾಡಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೆರವು ಪಡೆಯುವುದು, ಈ ಸಮಿತಿ ನಿಯಮಿತವಾಗಿ ಸಭೆ ನಡೆಸಿ ಮಾನವ ವನ್ಯ ಜೀವಿ ಸಂಘರ್ಷ ನಿಯಂತ್ರಣಕ್ಕೆ ಶ್ರಮಿಸುವಂತೆ ಸೂಚಿಸಿದರು.
ಕರ್ನಾಟಕದಲ್ಲಿ ಆನೆಗಳ ಸಂಖ್ಯೆ 6395 ಇದ್ದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಹುಲಿ ಸಂಖ್ಯೆ 563 ಇದ್ದು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, 1879 ಚಿರತೆಗಳಿದ್ದು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ವನ್ಯಜೀವಿ ಹಾವಳಿಯಿಂದ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 2022-23ರಲ್ಲಿ 57, 2023-24ರಲ್ಲಿ 65, 2024-25ರಲ್ಲಿ 46, 2025-26ರಲ್ಲಿ 32 ಮಾನವ ಜೀವ ಹಾನಿ ಸಂಭವಿಸಿದೆ.
ಚಾಮರಾಜನಗರ, ಕೊಡಗು, ಹಾಸನ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಾನವ ಪ್ರಾಣ ಹಾನಿ ಪ್ರಕರಣಗಳು ಸಂಭವಿಸಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024-25 ರಲ್ಲಿ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ 30% ಕಡಿತವಾಗಿದೆ. ವನ್ಯಜೀವಿಗಳು ಆಹಾರ ಹುಡುಕಿಕೊಂಡು ಹೊರಗೆ ಬರುವುದನ್ನು ನಿಗ್ರಹಿಸಬೇಕು. ಬೇಸಿಗೆಯ ಕಾಲದಲ್ಲಿ ವನ್ಯಜೀವಿಗಳಿಗೆ ಅರಣ್ಯದೊಳಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಲಾಂಟಾನ ಕಳೆದ ತೆಗೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವನ್ಯಪ್ರಾಣಿಗಳ ಮೇವಿಗೆ ಕೊರತೆ ಉಂಟಾಗುತ್ತದೆ ಎಂದರು.
ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ನರೇಂದ್ರ ಸ್ವಾಮಿ, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಕೃಪಾಕರ ಸೇನಾನಿ-ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಲು ಡ್ರೋನ್ ಕ್ಯಾಮರಾಗಳ ನಿಗಾಗೆ ಸಿಎಂ ಸೂಚನೆ

