ಸುದ್ದಿಮೂಲ ವಾರ್ತೆ
ಬಳ್ಳಾರಿ,ಜೂ.12:ಜೆಸ್ಕಾಂ ಜೂನ್ ತಿಂಗಳಿನಲ್ಲಿ ಗ್ರಾಹಕರಿಗೆ ನೀಡಿರುವ ವಿದ್ಯುತ್ ಬಿಲ್ನಲ್ಲಿ ವಿಧಿಸಿರುವ ಫ್ಯುಯಲ್ ಅಂಡ್ ಪವರ್ ಪರ್ಚೇಸ್ ಕಾಸ್ಟ್ ಅಡ್ಜೆಸ್ಟ್ಮೆಂಟ್ (ಎಫ್ಪಿಪಿಸಿಎ) ವೆಚ್ಚ 2 ರೂಪಾಯಿ 64 ಪೈಸೆ ಶುಲ್ಕವನ್ನು ಕಡಿತಗೊಳಿಸಿ ಉಳಿದ ಹಣವನ್ನು ಪಾವತಿಸಲು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿರ್ಣಯಕೈಗೊಂಡಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ನಡೆದ ಜೆಸ್ಕಾಂನ ಎಕ್ಸಿಕ್ಯೂಟಿವ್ ಇಂಜಿನಯರ್ಗಳಾದ ಹುಸೇನ್ಸಾಬ್ ಮತ್ತು ರಂಗನಾಥ್ಬಾಬು ಅವರ ನೇತೃತ್ವದಲ್ಲಿ ಅಧಿಕಾರಿಗಳು, ವಾಣಿಜ್ಯೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಜಂಟಿ ಸಭೆಯಲ್ಲಿ ಈ ಕುರಿತು ನಿರ್ಣಯಕೈಗೊಳ್ಳಲಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್ ಮತ್ತು ಗೌರವ ಕಾರ್ಯದರ್ಶಿ ಯಶವಂತ್ರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ.
ಕರ್ನಾಟಕ ಎಲೆಕ್ಟಿçಸಿಟಿ ರೆಗ್ಯುಲೇಟರಿ ಕಮಿಷನ್ನ ಆದೇಶಗಳ ಪ್ರಕಾರ ಪ್ರತಿ ತಿಂಗಳು ವಿಧಿಸಬೇಕಾಗಿದ್ದ ಫ್ಯುಯಲ್ ಅಂಡ್ ಪವರ್ ಪರ್ಚೇಸ್ ಕಾಸ್ಟ್ ಅಡ್ಜೆಸ್ಟ್ಮೆಂಟ್ (ಎಫ್ಪಿಪಿಸಿಎ) ವೆಚ್ಚವನ್ನು ಏಕಾಏಕಿ ಗ್ರಾಹಕರ ಮೇಲೆ ವಿಧಿಸುತ್ತಿರುವುದು ಅವೈಜ್ಞಾನಿಕವಾಗಿದ್ದು, ಕಾನೂನಿನ ಉಲ್ಲಂಘನೆ ಆದಂತಾಗಿದೆ. ಅಷ್ಟೇ ಅಲ್ಲದೇ, ಗ್ರಾಹಕರ ಮೇಲೆ ಏಕಾಏಕಿ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ.
ಜೆಸ್ಕಾಂನ ಮೇಲಧಿಕಾರಿಗಳಿಗೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ನಡೆದ ಸಭೆಯ ಸಮಗ್ರ ಮಾಹಿತಿಯನ್ನು ನೀಡಿರಿ. ಫ್ಯುಯಲ್ ಅಂಡ್ ಪವರ್ ಪರ್ಚೇಸ್ ಕಾಸ್ಟ್ ಅಡ್ಜೆಸ್ಟ್ಮೆಂಟ್ (ಎಫ್ಪಿಪಿಸಿಎ) ವೆಚ್ಚ ಸಂಗ್ರಹದ ಕುರಿತು ನಾವುಗಳು ಸಲ್ಲಿಸುವ ತೀವ್ರ ಅಸಮಾಧಾನದ ಲಿಖಿತ ಮನವಿಗಳನ್ನು ಸಲ್ಲಿಸಿ, ಕಡಿತಗೊಳಿಸಲು ಪರವಾನಿಗೆ ಪಡೆಯಲು ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ಸಭೆಯಲ್ಲಿ ಅಧಿಕಾರಿಗಳಲ್ಲಿ ಒತ್ತಡ ಹೇರಿದರು.
ಕೈಗಾರಿಕೆಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ವಾಣಿಜ್ಯೋದ್ಯಮಗಳು – ಆರ್ಥಿಕ ವ್ಯವಹಾರಗಳು ಸಾಕಷ್ಟು ಏರುಪೇರಿನಿಂದ ಸಂಕಷ್ಟದಲ್ಲಿವೆ. ಬಂಡವಾಳ ಹೂಡಿರುವವರು ಉದ್ಯಮಗಳನ್ನು ನಡೆಸುವುದೇ ಕಷ್ಟವಾಗುತ್ತಿರುವಾಗ ವಿದ್ಯುತ್ ಶುಲ್ಕದಲ್ಲಿ ಫ್ಯುಯಲ್ ಅಂಡ್ ಪವರ್ ಪರ್ಚೇಸ್ ಕಾಸ್ಟ್ ಅಡ್ಜೆಸ್ಟ್ಮೆಂಟ್ (ಎಫ್ಪಿಪಿಸಿಎ) ವೆಚ್ಚವನ್ನು ಏಕಾಏಕಿ ಹೆಚ್ಚಿಸುತ್ತಿರುವುದು ಅಸಂಬದ್ಧ ಎಂದು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್ ಮತ್ತು ಗೌರವ ಕಾರ್ಯದರ್ಶಿ ಯಶವಂತ್ರಾಜ್ ನಾಗಿರೆಡ್ಡಿ ಅವರು ಜೆಸ್ಕಾಂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕೈಗಾರಿಕೋದ್ಯಮಿಗಳ ಪರವಾಗಿ ಕೈಗಾರಿಕೋದ್ಯಮಿ, ಕೆಐಎಡಿಬಿ ಕೈಗಾರಿಕಾ ಸಂಘದ ಗೌರವ ಕಾರ್ಯದರ್ಶಿ ವಾಸುದೇವರಾವ್, ಅವರು ಫ್ಯುಯಲ್ ಅಂಡ್ ಪವರ್ ಪರ್ಚೇಸ್ ಕಾಸ್ಟ್ ಅಡ್ಜೆಸ್ಟ್ಮೆಂಟ್ (ಎಫ್ಪಿಪಿಸಿಎ), ಪವರ್ ಪರ್ಚೇಸ್ ಕಾಸ್ಟ್ (ಪಿಪಿಸಿ), ಕರ್ನಾಟಕ ಎಲೆಕ್ಟಿçಸಿಟಿ ರೆಗ್ಯುಲೇಟರಿ ಕಮಿಷನ್ ಕುರಿತು ಸಮಗ್ರವಾಗಿ ಸಭೆಗೆ ವಿವರಿಸಿ, ಎಫ್ಪಿಪಿಸಿಎ ಶುಲ್ಕ ಸಂಗ್ರಹ ಮಾಡುವಲ್ಲಿ ಜೆಸ್ಕಾಂ ನ್ಯೂನ್ಯತೆಗಳನ್ನು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬಿ. ಮಹಾರುದ್ರಗೌಡ, ಉಪಾಧ್ಯಕ್ಷರಾದ ರಮೇಶ್ ಬುಜ್ಜಿ, ಕೆ.ಸಿ. ಸುರೇಶ್ ಬಾಬು, ಜಂಟಿ ಕಾರ್ಯದರ್ಶಿಗಳಾದ ಎಸ್. ದೊಡ್ಡನಗೌಡ ಮತ್ತು ಸೊಂತಾ ಗಿರಿಧರ್ ಇನ್ನಿತರರು ಉಪಸ್ಥಿತರಿದ್ದರು.
ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್, ರೈಸ್ ಮಿಲ್ ಅಸೋಸಿಯೇಷನ್, ಕಾಟನ್ ಅಸೋಸಿಯೇಸನ್, ಇಂಡಸ್ಟಿçಯಲ್ ಅಸೋಸಿಯೇಷನ್, ಸ್ಪಾಂಜ್ ಐರನ್ ಅಸೋಸಿಯೇಷನ್, ಗಾರ್ಮೆಂಟ್ ಅಸೋಸಿಯೇಷನ್, ಹೋಟಲ್ ಮತ್ತು ಬೇಕರಿ ಮಾಲೀಕರ ಸಂಘ ಸೇರಿ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.