ಸುದ್ದಿಮೂಲ ವಾರ್ತೆ
ತುಮಕೂರು, ಅ.09 : ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತಿಯಾಗಿರುವ ಅರ್ಜಿಗಳನ್ನು ಹೆಚ್ಚಿನ ಆದ್ಯತೆ ಮೇರೆಗೆ ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಎಲ್ಲಾ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, 2022-23ನೇ ಸಾಲಿನಲ್ಲಿ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ಈವರೆಗೂ
ಪ್ರಾರಂಭಿಸದ ಫಲಾನುಭವಿಗಳು ಕೂಡಲೇ ಪ್ರಾರಂಭಿಸುವಂತೆ ಎಲ್ಲಾ ಇ.ಒ.ಗಳು ಕ್ರಮವಹಿಸಬೇಕೆಂದು ಹೇಳಿದರು.
ಬಗರ್ ಹುಕುಂ ಯೋಜನೆಗೆ ಸಂಬಂಧಿಸಿದಂತೆ ಗುಬ್ಬಿ, ತುರುವೇಕೆರೆ ಹಾಗೂ ಮಧುಗಿರಿ ತಾಲ್ಲೂಕುಗಳಿಂದ ಮಾತ್ರ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ ತಾಲ್ಲೂಕುಗಳು ಆದಷ್ಟು ಬೇಗ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕೆಂದು ತಹಶೀಲ್ದಾರರಿಗೆ ಹಳಿದರು.
ಜಿಲ್ಲೆಯಲ್ಲಿ 2023ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಮಾಡುವಲ್ಲಿ ತುರುವೇಕೆರೆ ತಾಲ್ಲೂಕು ಶೇ.65, ತಿಪಟೂರು ಶೇ.68, ಚಿಕ್ಕನಾಯಕನಹಳ್ಳಿ ಶೇ.78 ಹಾಗೂ ತುಮಕೂರು ತಾಲ್ಲೂಕು ಶೇ. 80ರಷ್ಟು ಪ್ರಗತಿ ಸಾಧಿಸಿದೆ. ಉಳಿದ ತಾಲ್ಲೂಕುಗಳು ಶೇ. 95ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿವೆ. ಇನ್ನೊಂದು ದಿನಗಳೊಳಗಾಗಿ ಶೇಕಡಾ ನೂರರಷ್ಟು ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲಾ ತಹಶೀಲ್ದಾರರು ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಈ- ಆಫೀಸ್ ತಂತ್ರಾಂಶದ ಮೂಲಕವೇ ಕಡತಗಳನ್ನು ಸ್ವೀಕೃತಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು.
ಯಾವುದೇ ಕಡತಗಳನ್ನು ಭೌತಿಕವಾಗಿ ವಿಲೇವಾರಿ ಮಾಡಬಾರದು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಉಪ ವಿಭಾಗಾಧಿಕಾರಿ ಗೌರವ್ಕುಮಾರ್ಶೆಟ್ಟಿ,ತಹಶೀಲ್ದಾರ್ ಸಿದ್ದೇಶ್ ಉಪಸ್ಥಿತರಿದ್ದರು.