ಸುದ್ದಿಮೂಲ ವಾರ್ತೆ
ತುಮಕೂರು, ಆ.2 : ಜಿಲ್ಲೆಯ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಕೈಗಾರಿಕೋದ್ಯಮಿಗಳ ಕೊಡುಗೆ ಪ್ರಮುಖವಾಗಿದ್ದು, ಎಲ್ಲ ರೀತಿಯಲ್ಲೂ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೈಗಾರಿಕೋದ್ಯಮಿಗಳ ಕುಂದು ಕೊರತೆ, ಕೈಗಾರಿಕಾ ಸ್ಪಂದನ ಹಾಗೂ ಜಿಲ್ಲಾಮಟ್ಟದ ಕೈಗಾರಿಕೆಗಳ ಏಕ
ಗವಾಕ್ಷಿ ಸಭೆಯ ಅಧ್ಯಕ್ಷತೆ ವಹಿಸಿ, ಕೈಗಾರಿಕೋದ್ಯಮಿಗಳ ಜೊತೆ ಸಮಾಲೋಚನೆ ನಡೆಸಿ, ಕೈಗಾರಿಕೆಗಳ ಕಾರ್ಯನಿರ್ವಹಣೆಯ ಕುರಿತು ಮಾಹಿತಿ ಪಡೆದು ಮಾತನಾಡಿದರು.
ಜಿಲ್ಲೆಯು ಅಪಾರವಾದ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿದ್ದು, ಕೈಗಾರಿಕಾ ಅಭಿವೃಧ್ದಿಗೆ ಹೆಚ್ಚಿನ ಅವಕಾಶ ಹೊಂದಿದೆ. ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ
ಕೈಗಾರಿಕೆಗಳಿಂದ ಉತ್ತಮ ಉದ್ಯೋಗಾವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಉದ್ಯೋಗ ಮೇಳವನ್ನು ಅಯೋಜಿಸಿದ್ದು, ತುಮಕೂರು ಹಾಗು ಬೆಂಗಳೂರಿನ
ಪ್ರಮುಖ 23 ಉದ್ದಿಮೆದಾರರು ಇದರಲ್ಲಿ ನೊಂದಾಯಿಸಿರುವುದು ಸಂತಸದ ವಿಷಯ ಇವರಿಗೆ ವಿವಿಧ ಕೌಶಲ್ಯವುಳ್ಳ 1523 ನೌಕರರ ಅಗತ್ಯವಿದೆ. ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ವಿದ್ಯುತ್, ನೀರು
ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಗುಣಮಟ್ಟ ಹೆಚ್ಚಿಸಿ, ಮತ್ತಿತರ ಮೂಲಸೌಕರ್ಯ ಒದಗಿಸಿ ಕೈಗಾರಿಕೆಗಳಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಲು ಜಿಲ್ಲಾಡಳಿತ ಶ್ರಮಿಸಲಿದೆ ಎಂದು ಹೇಳಿದರು.
ಜಿಲ್ಲೆಯ ವಾಣಿಜ್ಯೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ: ಜಿ. ಪರಮೇಶ್ವರ ಹಾಗೂ ಜಿಲ್ಲೆಯ ಶಾಸನ ಸಭೆಯ ಪ್ರತಿನಿಧಿಗಳ ನಿರ್ದೇಶನದಂತೆ ಸೆ. 13 ರಂದು ಜಿಲ್ಲಾ ಮಟ್ಟದ ಬೃಹತ್ ಉದ್ದಿಮೆದಾರ ದುಂಡು ಮೇಜಿನ ಸಮಾವೇಶ
ಆಯೋಜಿಸಲಾಗಿದ್ದು, ಇದರಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಅವಶ್ಯವಿರುವ ಮಾಹಿತಿಯನ್ನು ಪಡೆದು ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. 12 ಬೃಹತ್ ಉದ್ದಮೆದಾರರು 50 ಮಧ್ಯಮ
ಕೈಗಾರಿಕೆಗಳು ಹಾಗು ಕೈಗಾರಿಕಾ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಭಾಗವಹಿಸಲಿದ್ದು, ಪ್ರಮುಖ 10 ಯಶಸ್ವಿ ಉದ್ದಿಮೆಗಳ ಸಿಇಒ ಗಳನ್ನು ಸಮಾವೇಶದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೆ.ಐ.ಎ.ಡಿ.ಬಿಯ ಲಕ್ಷ್ಮೀಶ ಡಿ. ಅವರು ಮಾತನಾಡಿ, ಸದರಿ ಕೈಗಾರಿಕಾ
ಪ್ರದೇಶವು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಸರ್ವಿಸ್ ರಸ್ತೆಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವರ ಅನುಮತಿ ಅವಶ್ಯಕತೆ ಇದೆ ಎಂದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಯದರ್ಶಿ ಹರೀಶ್ ಮಾತನಾಡಿ, ಉದ್ದಮಿದಾರರು ಕೊಳವೆಬಾವಿ ಕೊರೆಯಲು ಅನುಮತಿಯನ್ನು ಕೋರಿದರು. ಈ ಬಗ್ಗೆ ಗಣಿ ಮತ್ತು ಭೂಗರ್ಭ
ಅಂತರ್ಜಲ ಇಲಾಖೆಯ ಅಧಿಕಾರಿಗಳಿಗೆ ಸಭೆಯನ್ನು ಕರೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಉದ್ದಿಮೆದಾರರು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಮಿಕರ ಸುರಕ್ಷತೆ ಬಗ್ಗೆ ಅಗತ್ಯ ಭದ್ರತೆ ಒದಗಿಸಿ ಕ್ರಮವಹಿಸಲು ಪೊಲೀಸ್ ಇಲಾಖೆಗೆ
ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರ ಕಾಯೋನ್ಮುಖರಾಗಿ ಕೈಗಾರಿಕೆಗಳ ಬೆಳವಣಿಗೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಶ್ರಮಿಸಬೇಕು.
ಪ್ರತಿ ಎರಡು ಮಾಹೆಗಳಿಗೆ ಒಮ್ಮೆ ಸಭೆ ನಡೆಸಿ ಕೈಗಾರಿಕೋದ್ಯಮಿಗಳ ಸಮಸ್ಯೆಗಳಿದ್ದಲ್ಲಿ ಬಗೆಹರಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಹಾಗೂ ಜಿಲ್ಲಾ ಮಟ್ಟದ
ಏಕಗವಾಕ್ಷಿ ಸಮಿತಿಯ ಸದಸ್ಯ ಕಾರ್ಯದರ್ಶಿ ಡಿ.ಕೆ. ಲಿಂಗರಾಜ್, ಡಿ.ಎಸ್.ಇವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.