ಸುದ್ದಿಮೂಲ ವಾರ್ತೆ
ಯಾದಗಿರಿ,ಆ.7:ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಇಂದ್ರಧನುಷ್ ಲಸಿಕೆಯನ್ನು ನಿಡಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿರುವ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರಿಗೆ ಲಸಿಕೆಯನ್ನು ಕೊಡಿಸುವ ಮೂಲಕ ದಡಾರ ಮತ್ತು ರುಬೆಲ್ಲಾ ರೋಗದಿಂದ ದೂರವಿಡಲು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಕೋರಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಹಮ್ಮಿಕೊಂಡ ಮಿಷನ್ ಇಂದ್ರಧನುಷ್ ಅಭಿಯಾನದ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಹಾಗೂ ಸಾಂಕೇತಿಕವಾಗಿ ಮಗುವಿಗೆ ಲಸಿಕೆ ನೀಡುವುದಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲು ಪ್ರತಿಯೊಬ್ಬ ಅಧಿಕಾರಿಯು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮತ್ತು ಲಸಿಕೆಯಿಂದ ತಪ್ಪಿದ ಮಕ್ಕಳು ಮತ್ತು ಗರ್ಭಿಣೀಯರನ್ನು ಲಸಿಕಾಕರಣಕ್ಕೆ ಕರೆತಂದು ಲಸಿಕೆಯನ್ನು ಹಾಕಿಸಲು ಶ್ರಮಿಸಿ, ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.
ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ವಯೋಮಾನಕ್ಕೆ ಅನುಗುಣವಾಗಿ ಲಸಿಕೆಗಳನ್ನು ನೀಡಲಾಗುತ್ತದೆ. ಪಾಲಕರು ನಿರ್ಲಕ್ಷ್ಯ ವಹಿಸಿದರೆ ದಡಾರ ರೋಗವು ಮಾರಣಾಂತಿಕವಾಗಬಹುದು. ಆದ್ದರಿಂದ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ನಿಗದಿತ ಸಮಯಕ್ಕೆ ಲಸಿಕೆ ಹಾಕಿಸಬೇಕು. ಈ ವಿಚಾರವಾಗಿ ಜನರು ಜಾಗೃತರಾಗಬೇಕು. ಅಮೃತ ಸಮಾನವಾದ ಲಸಿಕೆಗಳನ್ನು ಕಾಲ ಕಾಲಕ್ಕೆ ಕೊಡಿಸುವುದರಿಂದ ಮಕ್ಕಳನ್ನು ಕಾಯಿಲೆಗಳಿಂದ ರಕ್ಷಿಸಬಹುದು ಎಂದು ಜಿಲ್ಲಾಧಿಕಾರಿ ನುಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಅವರು ಮಾತನಾಡಿ, ದಡಾರ ಮತ್ತು ರುಬೆಲ್ಲಾ ರೋಗಗಳನ್ನು ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ತೀವ್ರತರವಾದ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಇಂದಿನಿಂದ ಆಗಸ್ಟ್ 12ರ ವರೆಗೆ ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ಸೆಪ್ಟಂಬರ್ 11ರಿಂದ 16ರ ವರೆಗೆ ಎರಡನೇ ಸುತ್ತು, ಅಕ್ಟೋಬರ್ 9ರಿಂದ 14ರ ವರೆಗೆ ಮೂರನೇ ಸುತ್ತುಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಪ್ರಭಾರಿ ಡಿಹೆಚ್ಓ ಡಾ.ಲಕ್ಷ್ಮೀಕಾಂತ ಒಂಟೀಪೀರ, ಆರ್ಸಿಹೆಚ್ಓ ಡಾ. ಮಲ್ಲಪ್ಪ, ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿ ಡಾ.ಸಂಜೀವಕುಮಾರ ರಾಯಚೂರಕರ್, ಜಿಲ್ಲಾ ಸರ್ವೇಕ್ಷಣೆ ಅಧಿಕಾರಿ ಡಾ.ಸಾಜಿದ್ ಮುಬಾಶಿರ್, ಯಾದಗಿರಿ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ತಹಶೀಲ್ದಾರ ಸುರೇಶ ಅಂಕಲಗಿ, ಡಿಟಿಓ ಡಾ.ಭಗವಂತ ಅನ್ವರ, ಪ್ರಭಾರಿ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ, ಮಹಿಳಾ ಮತ್ತು ಮಕ್ಕಳು ಇಲಾಖೆ ಅಧಿಕಾರಿ ಪ್ರೇಮಮೂರ್ತಿ ಕೆ, ಬಿಇಓ ಮಲ್ಲಿಕಾರ್ಜುನ ಪೂಜಾರಿ, ಸಿಡಿಪಿಓ ಲಾಲಸಾಬ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.