ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಜೂ.17: ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜು ಪೂರ್ಣ ಪ್ರಮಾಣದಲ್ಲಿ ಆರಂಭ, ವಿಶ್ವ ವಿಖ್ಯಾತ ನಂದಿ ಬೆಟ್ಟದ ರೋಪ್ ವೇ ನಿಧಾನ ಗತಿ ಕಾಮಗಾರಿ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳ ಕುರಿತ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಮೆಡಿಕಲ್ ಕಾಲೇಜು ಆರಂಭ ಮತ್ತು ರೋಪ್ ವೇ ಕಾಮಗಾರಿ ಜಿಲ್ಲೆಯ ಎರಡು ಮುಕುಟ ಪ್ರಾಯ ಕಾಮಗಾರಿಗಳು. ಚಿಕ್ಕಬಳ್ಳಾಪುರ ಜಿಲ್ಲೆ ಐತಿಹಾಸಿಕವಾಗಿ, ಪ್ರೇಕ್ಷಣೀಯ ಸ್ಥಳವಾಗಿ ಖ್ಯಾತಿಗಳಿಸಿದೆ. ಇಲ್ಲಿನ ಸಮಸ್ತ ವಿಷಯಗಳನ್ನು ಇಲಾಖೆವಾರು, ಸ್ಥಳವಾರು ಪರಿಚಯ ಮಾಡಿಕೊಳ್ಳುವ ಕಾರ್ಯದಲ್ಲಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಪ್ರಥಮಾಧ್ಯತೆ ಮೇಲೆ ಕಾರ್ಯ ನಿರ್ವಹಿಸಲು ಗಮನವಹಿಸಿದ್ದೇನೆ. ನಗರ, ಗ್ರಾಮಗಳ ರಸ್ತೆ ಅಗಲೀಕರಣ, ಕೆರೆಗಳ ನೀರಿನ ಒಳಹರಿವು ಮತ್ತು ಹೊರಹರಿವು ಸರಾಗವಾಗಿ ಸಾಗಲು ಕ್ರಮ, ನಿಯಮಾನುಸಾರ ವಸತಿ ಖಾತಾ ಮಾಡುವುದು, ಕಂದಾಯ ಇಲಾಖೆಯಲ್ಲಿನ ಸೇವೆಗಳನ್ನು ಜನರಿಗೆ ತಲುಪಿಸುವ ಜೊತೆಗೆ ಸರ್ಕಾರದ ಎಲ್ಲ ಯೋಜನೆಗಳನ್ನು ಸಕಾಲಕ್ಕೆ ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪಾದಚಾರಿ ಮಾರ್ಗಕ್ಕೆ ಅನುವು: ಜಿಲ್ಲೆಯ ನಗರ ಪ್ರದೇಶಗಳ ಮಾರುಕಟ್ಟೆಗಳು, ರಸ್ತೆಗಳು, ವೃತ್ತಗಳಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ. ತಮಗೆ ಅನುಮತಿ ಇರುವ ಕಡೆ ಮಾತ್ರ ವ್ಯಾಪಾರ ವಹಿವಾಟು ಮಾಡಬೇಕು. ಈ ಕುರಿತು ಜಿಲ್ಲೆಯ ಸಮಸ್ತ ವರ್ತಕರು, ನಾಗರೀಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ: ಉತ್ತಮ ಶಿಕ್ಷಣ, ಆರೋಗ್ಯ ಕಲ್ಯಾಣ ಸಮಾಜದ ಮಾಪಕಗಳು ಎಂದರೆ ತಪ್ಪಾಗಲಾರದು. ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಅಗತ್ಯತೆಗಳ ಸೇವೆಗೆ ಆದ್ಯತೆ ನೀಡಲಾಗುವುದು. ಜಿಲ್ಲಾಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಅರಿತು ಬಗೆಹರಿಸಲಾಗುವುದು. ಜಿಲ್ಲೆಯಲ್ಲಿನ ಪ್ರಮುಖ ಜಲಮೂಲವಾಗಿರುವ ಕೆರೆಗಳ ಅಭಿವೃದ್ಧಿಗೆ ಅನುದಾನದ ಲಭ್ಯತೆಯನ್ನು ನೋಡಿಕೊಂಡು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುರಕ್ಷತೆ ಮುಖ್ಯ: ಪರವಾನಗಿ ಪಡೆದು ಗಣಿಗಾರಿಕೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಪರವಾನಗಿ ಹೊಂದಿದವರು ಮಾತ್ರವೇ ಗಣಿಗಾರಿಕೆ ಮಾಡಬೇಕು. ಗಣಿಗಾರಿಕೆಯಲ್ಲಿನ ಕಾರ್ಮಿಕರ ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು ನಡೆಸಬೇಕು. ಅನುಮತಿಸಿದ ತೂಕಕ್ಕೆ ಅನುಸರವಾಗಿ ವಾಹನಗಳಲ್ಲಿ ಜಲ್ಲಿ, ಮರಳು ಸಾಗಾಟ ಮಾಡುವುದು ಅತೀ ಮುಖ್ಯ. ಈ ನಿಯಮಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಬದ್ದತೆಯಿಂದ ಸೇವೆ ಮಾಡಿ: ಸರ್ಕಾರಿ ಸೇವೆಯಲ್ಲಿ ಬದ್ದತೆ ತೋರಬೇಕು, ಜಿಲ್ಲಾಡಳಿತದ ಪ್ರತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ವಾಸ್ತವ್ಯವಿದ್ದು ಬದ್ದತೆಯಿಂದ ಕೆಲಸ ನಿರ್ವಹಿಸಬೇಕು. ಕೇವಲ ಬೆಳಿಗ್ಗೆ 10 ರಿಂದ 5.30ಕ್ಕೆ ಸರ್ಕಾರಿ ಸೇವೆ ಮುಗಿಯಿತು ಎಂಬ ಮನೋಧೋರಣೆ ಇರಬಾರದು, ದಿನದ 24 ತಾಸು ಸರ್ಕಾರಿ ಸೇವೆಗೆ ಲಭ್ಯರಿರಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.