ಸುದ್ದಿಮೂಲ ವಾರ್ತೆ
ಯಾದಗಿರಿ,ಮೇ 26:ಪ್ರಸಕ್ತ ಮಾನ್ಸೂನ್ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಅತಿವೃಷ್ಟಿ, ಪ್ರವಾಹ, ಬಿರುಗಾಳಿ, ಸಿಡಿಲು ಇತ್ಯಾದಿಗಳಿಂದ ಸಾರ್ವಜನಿಕರಿಗೆ ಹಾಗೂ ಆಸ್ತಿ- ಪಾಸ್ತಿಗಳಿಗೆ ಉಂಟಾಗುವ ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲಾ ಅಧಿಕಾರಿಗಳು ಸನ್ನದ್ದರಾಗಿ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2023 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾಗುವ ಬಾರಿ ಮಳೆ, ಗುಡುಗು ಮತ್ತು ಸಿಡಿಲು, ಪ್ರವಾಹ ಕುರಿತು ತೆಗೆದುಕೊಳ್ಳಬೇಕಾದ ಪೂರ್ವ ಸಿದ್ದತೆ ಕುರಿತು ಚರ್ಚಿಸಲು ಅಧಿಕಾರಿಗಳೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಅವರು ಮಾತನಾಡಿದರು.
ಆಯಾಯ ತಾಲೂಕು ತಹಶೀಲ್ದಾರರಿಗೆ ಬಿಡುಗಡೆ ಮಾಡಿರುವ ಅನುದಾನದಿಂದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪರಿಹಾರ ಪಾವತಿ ಮಾಡುವುದು. ಕಚೇರಿಯಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್ ರೂಮ್ ತೆರೆದು 24 ಗಂಟೆಯೂ ಕಾರ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸುವುದು. ಪ್ರತಿದಿನದ ಮಳೆ ಮತ್ತು ಹಾನಿಯ ವರದಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿ ಎಂದ ಜಿಲ್ಲಾಧಿಕಾರಿಗಳು, ಕಳೆದ ವರ್ಷ ಹೆಚ್ಚಿನ ಪ್ರವಾಹ ಉಂಟಾದ ಪ್ರದೇಶಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಒದಗಿಸುವ ಗುಡುಗು ಮತ್ತು ಸಿಡಿಲಿನ ಅಪಾಯಗಳ ಮುನ್ಸೂಚನೆಯನ್ನು ಹಾಗೂ ಅಂತಹ ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳನ್ನು ಗ್ರಾಮ ಮಟ್ಟದ ಜನರವರೆಗೂ ತಲುಪಿಸಿ ಸುರಕ್ಷಿತೆ ಕಾಪಾಡಿಕೊಳ್ಳಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮಳೆಗಾಲಕ್ಕೆ ರಕ್ಷಣಾ ಸಾಮಾಗ್ರಿಯೊಂದಿಗೆ ಸನ್ನದ್ದರಾಗಿರುವುದು. ನೆರೆ ಉಂಟಾದಲ್ಲಿ ಅವಶ್ಯಕ ಬೋಟುಗಳ ಶೇಖರಣೆ ಮಾಡಿಸಿಟ್ಟುಕೊಳ್ಳುವುದು. ನುರಿತ ಈಜುಗಾರರ ಮಾಹಿತಿಯನ್ನು ತಾಲೂಕುವಾರು ಇಟ್ಟುಕೊಳ್ಳಬೇಕೆಂದು ಅಗ್ನಿ ಶಾಮಕ ಅಧಿಕಾರಿಗಳಿಗೆ ತಿಳಿಸಿದರು.
ಹೆದ್ದಾರಿ, ರಸ್ತೆ, ಕಟ್ಟಡಗಳ ಮೇಲೆ ಮಳೆ ಬಂದಾಗ, ಗಾಳಿ ಮಳೆಯಿಂದ, ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದಾಗ ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು. ವಿದ್ಯುತ್ ತಂತಿಗಳಿಗೆ ಅಪಾಯಕಾರಿಯಾಗುವ ಮರದ ಕೊಂಬೆಗಳನ್ನು ಕಡಿಯಲು ಮತ್ತು ಬೇರುಗಳ ಮೇಲೆ ಬಂದು ಬೀಳುವ ಹಂತದಲ್ಲಿರುವ ಮರಗಳನ್ನು ತೆಗೆಯುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸೇತುವೆಗಳ ಬದಿಗಳು, ನದಿ ದಂಡೆಗಳು ಮುಂತಾದವು ಶಿಥಿಲಾವಸ್ಥೆಯಲ್ಲಿರುವುದನ್ನು ಪತ್ತೆ ಹಚ್ಚಿ ದುರಸ್ತಿಗಾಗಿ ಕಾಮಗಾರಿಗಳನ್ನು ಕೈಗೊಳ್ಳುಬೇಕು. ನದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಹಲಗೆ/ ಗೇಟ್ ಗಳನ್ನು ತೆರವುಗೊಳಿಸಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಹಾಗೂ ತೋಡುಗಳನ್ನು ಸ್ವಚ್ಚಗೊಳಿಸಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮಗಳಲ್ಲಿ ಕೆರೆಗಳನ್ನು ಮತ್ತು ನೀರಿನ ಗುಂಡಿಗಳ ಸುತ್ತ ತಡೆಬೇಲಿಗಳನ್ನು ಹಾಕಬೇಕು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸುವ ಇನ್ನಿತರ ಕ್ರಮಗಳ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಗಣಿಗಾರಿಕೆ ನಡೆದಂತಹ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಈಜಾಡಲು ಹೋಗುವುದರಿಂದ ಜೀವಹಾನಿ ಆಗುತ್ತಿರುವುದರಿಂದ ಗಣಿಗಾರಿಕೆ ನಡೆಸಿದ ಪ್ರದೇಶಗಳಲ್ಲಿ ಈಜಾಟವನ್ನು ನಿಷೇಧಿಸಿದೆ ಎಂಬ ಎಚ್ಚರಿಗೆ ನಾಮಫಲಕ ಅಳವಡಿಸಬೇಕು. ಏನಾದರೂ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಮಾಲಿಕರು/ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನಚ್ಚರಿಕೆ ವಹಿಸಿ ತಡೆಗೆ ಕ್ರಮ ಕೈಗೊಳ್ಳುವುದು .ಎಲ್ಲಾ ಕಾಯಿಲೆಗಳಿಗೆ ಬೇಕಾಗುವ ಔಷಧ ಚುಚ್ಚುಮದ್ದು ಇತ್ಯಾದಿ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡುವುದು. ವೈದ್ಯಕೀಯ ಸೌಲಭ್ಯಗಳ ಸಹಿತ ಆಂಬುಲೆನ್ಸ್ಗಳು ಸನ್ನದ್ಧರಾಗಿರಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಗರ ಪ್ರದೇಶಗಳಲ್ಲೂ ಮಳೆಗಾಲದಲ್ಲಿ ಸ್ವಚ್ಚತೆಯನ್ನು ಕಾಪಾಡಿ ರೋಗ-ರುಜಿನಗಳು ಹರಡದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳು ಮಳೆಯಿಂದ ಸೋರಿಕೆಯಾಗುವುದು ಕಂಡು ಬಂದರೆ ಸರಿಪಡಿಸಿ.
ನದಿ ತೀರದಲ್ಲಿನ ಗ್ರಾಮಗಳಿಗೆ ಭೇಟಿ ನೀಡಿ ಸಾಂದರ್ಭಿಕ ಅನುಸಾರ ಕ್ರಮ ಕೈಗೊಳ್ಳಿ ಅಗತ್ಯ ಬಿದ್ದಲ್ಲಿ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಿ, ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು ಸಾರ್ವಜನಿಕರಿಗೆ ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ, ಅರಣ್ಯ ಸಂರಕ್ಷಣಾಧಿಕಾರಿ ಖಾಜಲ್ ಪಾಟೀಲ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವ ಶರಣಪ್ಪ ನಂದಗಿರಿ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ರೇಖಾ ಮ್ಯಾಗೇರಿ, ಪ್ರಭಾರಿ ಡಿಹೆಚ್ಓ ಡಾ.ಸಂಜೀವಕುಮಾರ ರಾಯಚೂರಕರ್, ನಗರಸಭೆ ಆಯುಕ್ತ ಸಂಗಮೇಶ ಉಪಾಸೆ, ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ, ಜಿಲ್ಲಾ ಪಂಚಾಯತ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ , ಯಾದಗಿರಿ ತಹಶೀಲ್ದಾರ ಅಣ್ಣಾರಾವ್ ಪಾಟೀಲ್, ಹುಣಸಗಿ ತಹಶೀಲ್ದಾರ ಜಗದೀಶ ಚೌರ್, ಸುರಪುರ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಸೇರಿದಂತೆ ಇನ್ನಿತರ ಇಲಾಖೆಯ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು .