ಸುದ್ದಿಮೂಲ ವಾರ್ತೆ
ಯಾದಗಿರಿ,ಆ.10: ರಾಜ್ಯದ ಜನತೆಗೆ ನೀಡಿದ್ದ ಭಾರವಸೆಯಂತೆ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಪರಿಣಾಮಕಾರಿ ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಹೊಸಳ್ಳಿ ರಸ್ತೆ ಪಕ್ಕದಲ್ಲಿರುವ ಕೆ.ಪಿ.ಟಿ.ಸಿ.ಎಲ್ ಸಭಾಂಗಣದಲ್ಲಿ ಇಂದು *ಗೃಹಜ್ಯೋತಿ* ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ 52 ಸಾವಿರ ಕೋ.ರೂಗಳ ಅನುದಾನ ವ್ಯಯವಾಗಲಿದ್ದು,ಇದಕ್ಕಾಗಿ ಐತಿಹಾಸಿಕ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಎಲ್ಲ ಜನತೆಯ ವಿಶ್ವಾಸಕ್ಕೆ ಹಾಗೂ ಸಂತಸಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಬಂದ ತಕ್ಷಣ ಕೇವಲ 2 ತಿಂಗಳಲ್ಲಿಯೇ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳನ್ನು ಜಾರಿಗೊಳಿಸಲು ಕೈಗೊಂಡಿರುವ ಕ್ರಮ ಐತಿಹಾಸಿಕ ಹೆಜ್ಜೆಯಾಗಿದೆ. ಬೆಲೆ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದ ನಾಡಿನ ಜನತೆಗೆ ಗ್ಯಾರಂಟಿ ಯೋಜನೆಗಳು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತಿದ್ದು, ಅರ್ಹ ಫಲಾನುಭವಿಗಳೂ ಕೂಡ ಇದರ ಸದುಪಯೋಗ ಪಡೆಯುವಂತೆ ಅವರು ತಿಳಿಸಿದರು.
ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಪ್ರಯಾಣದಲ್ಲಿ ಹೆಚ್ಚಳವಾಗಿದೆ. ಈ ಹಿಂದೆ ಬಸ್ ಗಳಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದ 50 ಲಕ್ಷ ಪ್ರಯಾಣಿಕರ ಪ್ರಮಾಣದಲ್ಲಿ ಈಗ ಹೆಚ್ಚಳವಾಗಿ 1.30 ಕೋಟಿಗೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದು ಹೇಳಿದರು.
ರಸ್ತೆ ಸಾರಿಗೆ ನಿಗಮಗಳಲ್ಲಿ ಸುಧಾರಣೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಕೊರತೆ ಇರುವ 13 ಸಾವಿರ ಸಿಬ್ಬಂದಿಗಳ ನೇಮಕಕ್ಕೂ ಕ್ರಮ ಕೈಗೊಂಡಿದೆ. ಅದರಂತೆ 4 ಸಾವಿರ ಹೊಸ ಬಸ್ ಗಳನ್ನು ಸಹ ರಾಜ್ಯಕ್ಕೆ ಕೊಡುಗೆ ನೀಡಿದ್ದು ಜನರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿಯಲ್ಲಿ ಸುಮಾರು 1.42ಕೋ. ಕುಟುಂಬಗಳು ನೋಂದಣಿ ಯಾಗಿವೆ .ರಾಜ್ಯದ ಬಡ, ಮಧ್ಯಮ, ಹಾಗೂ ಶ್ರೀಮಂತ ವರ್ಗದವರಿಗೂ ತಲಾ 200 ಯೂನಿಟ್ ಉಚಿತ ವಿದ್ಯುತ್ ದೊರಕಿಸುವ ಮೂಲಕ ರಾಜ್ಯ ಸರ್ಕಾರ ಎಲ್ಲ ವರ್ಗದ ಜನರ ಹಿತ ಕಾಪಾಡಿದೆ ಎಂದು ಅವರು ಹೇಳಿದರು.
ಅದರಂತೆ ಅನ್ನಭಾಗ್ಯ ಯೋಜನೆಯ ಮೂಲಕ ಹಸಿದವರಿಗೆ ಅನ್ನ ನೀಡುವ ಕಾರ್ಯ ಸರ್ಕಾರ ಮಾಡಿದೆ. 5 ಕೆಜಿ ಅಕ್ಕಿ ಹಾಗೂ ಬಾಕಿ ನೀಡಬೇಕಾದ
5 ಕೆಜಿ ಅಕ್ಕಿಗೆ 170 ರೂ. ನೀಡುವ ಮೂಲಕ ಬಡವರಿಗೆ ನೆರವಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮಹಿಳಾ ಯಜಮಾನಿಗೆ 2 ಸಾವಿರ ರೂ ನೀಡುತ್ತಿದ್ದು ಶೇ 76 ರಷ್ಟು ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಇನ್ನುಳಿದ ಫಲಾನುಭವಿಗಳು ಸಹ ನೋಂದಣಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯ ಸರ್ಕಾರ ಈ ಮಹಾತ್ವಾಕಾಂಕ್ಷಿ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗಮನ ನೀಡಿದೆ. ಅದರಂತೆ ಮಹಿಳಾ ಸಬಲೀಕರಣಕ್ಕೂ ಹಲವು ರೀತಿಯಲ್ಲಿ ನೆರವಾಗುತ್ತಿದೆ ಎಂದು ಅವರು ಹೇಳಿದರು .
ಜಿಲ್ಲೆಯಲ್ಲಿ ರೈತರ ಅನುಕೂಲಕ್ಕಾಗಿ 7 ಗಂಟೆ ನಿರಂತರ ವಿದ್ಯುತ್ ಸರಬರಾಜು ಸೌಲಭ್ಯ ಕಲ್ಪಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಲು ಅವಶ್ಯಕ ಯೋಜನೆ ರೂಪಿಸಬೇಕು. ಸರ್ಕಾರ ದ ಮಟ್ಟದಲ್ಲಿಯೂ ಈ ಕುರಿತು ಸೂಕ್ತ ಕ್ರಮ ಸಹ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿ, ಜನರ ಕಷ್ಟಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು, ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟದಲ್ಲಿದ್ದ ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನಗಳು ನೆರವಾಗಿವೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಬಲತೆಗೆ ನೆರವಾಗಿದೆ ಎಂದ ಅವರು ಜಿಲ್ಲೆ ಹಾಗೂ ಸುರಪುರ ಭಾಗದಲ್ಲಿ ನಿರಂತರ ಮತ್ತು ಕಡಿತವಿಲ್ಲದ ವಿದ್ಯುತ್ ಸರಬರಾಜು ಆಗುವ ಅವಶ್ಯಕತೆ ಇದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು, ನುಡಿದಂತೆ ನಡೆದ ರಾಜ್ಯ ಸರ್ಕಾರ ರಾಜ್ಯದ ಪ್ರತಿ ಕುಟುಂಬಕ್ಕೆ ನೆರವಾಗಲು ಈ ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದು, ಇದರಿಂದ ಪ್ರತಿ ಕುಟುಂಬದಲ್ಲಿ 4800 ರೂಪಾಯಿಗಳಿಂದ 6000 ರೂಗಳ ವರೆಗೆ ಉಳಿತಾಯ ವಾಗಿ,ಆರ್ಥಿಕವಾಗಿ ಅನುಕೂಲವಾಗಲಿದೆ ಎಂದರು.
ಬೇರೆಯವರ ಮೇಲೆ ಅವಲಂಬನೆ ತಪ್ಪಿ ಸ್ವಾವಲಂಬಿ ಜೀವನಕ್ಕೆ ಇದು ನೆರವಾಗಿದ್ದು, ಮಹಿಳೆಯರು, ಯುವ ಜನಾಂಗ ಹಾಗೂ ಎಲ್ಲ ವರ್ಗದ ಜನರು ಇದರ ಲಾಭ ಪಡೆಯುತ್ತಿದ್ದು, ಸರ್ಕಾರದ ಪರಿಣಾಮಕಾರಿ ಯೋಜನೆಗಳು ಇದಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳತಲಾ 5 ಫಲಾನುಭವಿಗಳಿಗೆ ಶೂನ್ಯ ಬಿಲ್ ನೀಡಲಾಯಿತು.
ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ, ಜೆಸ್ಕಾಂ ಡಿ.ಟಿ.ಶ್ರೀ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.