ಸುದ್ದಿಮೂಲ ವಾರ್ತೆ
ಯಾದಗಿರಿ,ಜೂ. 28:ಗುರುಮಿಠಕಲ್ ತಾಲೂಕಿನ ಹಿಮ್ಲಾಪೂರ ಗ್ರಾಮದಲ್ಲಿ ಸೋಮವಾರ ಸಂಜೆಯಿಂದ ವಾಂತಿ ಭೇದಿ ಪ್ರಕರಣಗಳು ಕಾಣಿಸಿಕೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ವ್ಯವಸ್ಥೆ ಮಾಡುತ್ತಿದ್ದು ಯಾವುದೇ ಜೀವ ಹಾನಿ ಇಲ್ಲ. ಗ್ರಾಮಸ್ಥರು ಆತಂಕ ಪಡಬಾರದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ತಿಳಿಸಿದರು.
ಗುರುಮಿಠಕಲ್ ತಾಲೂಕಿನ ಇಮ್ಲಾಪೂರ ಗ್ರಾಮದ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಸಚಿವರು ಯಾದಗಿರಿ ಜಿಲ್ಲಾಸ್ಪತ್ರೆ, ಗುರುಮಿಠಕಲ್ ತಾಲೂಕು ಆಸ್ಪತ್ರೆ, ಇಮ್ಲಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ದಾಖಲಾದವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು.
ಸುಮಾರು 64 ಜನರು ವಾಂತಿ, ಭೇದಿ ಕಾರಣದಿಂದ ಚಿಕಿತ್ಸೆಗೆ ದಾಖಲಾಗಿದ್ದು ಅದರಲ್ಲಿ 40 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 14 ಜನರು ಗುರುಮಿಠಕಲ್ ತಾಲೂಕು ಆಸ್ಪತ್ರೆಯಲ್ಲಿ, 4 ಜನರು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ, 6 ಜನ ಹಿಮ್ಲಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಗುಣಮುಖರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಸಚಿವರು ತಿಳಿಸಿದರು.
ಗ್ರಾಮದ ಕುಡಿಯುವ ನೀರಿನ ಮೂಲಗಳಿಂದ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲು ಲ್ಯಾಬ್ ಗೆ ಕಳುಹಿಸಲಾಗಿದೆ. ವಾಂತಿ, ಭೇದಿಗೆ ಕಾರಣವೇನೆಂದು ವರದಿ ಬಂದ ನಂತರ ತಿಳಿಯುತ್ತದೆ ಎಂದರು.
ಗ್ರಾಮದಲ್ಲಿನ ಪೈಪ್ ಲೈನ್, ನೀರು ಸರಬರಾಜು ಮಾಡುವ ಕೊಳವೆ ಬಾವಿ, ನೀರಿನ ಟ್ಯಾಂಕ್ ಮತ್ತು ಇನ್ನೀತರ ನೀರಿನ ಮೂಲಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿ, ಸಕಾಲಕ್ಕೆ ಸ್ವಚ್ಚಗೊಳಿಸಬೇಕು ಎಂದು ಸೂಚಿಸಿದರು. ಗ್ರಾಮಸ್ಥರು ಶುದ್ದೀಕರಣ ಘಟಕದಿಂದ ನೀರು ಪಡೆದು ಕುಡಿಯಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ಆರ್ ನಾಯ್ಕ, ಡಿವೈಎಸ್ಪಿ ಬಸವೇಶ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.