ಸುದ್ದಿಮೂಲ ವಾರ್ತೆ
ಬೆಂಗಳೂರು,ನ.6: ದೀಪಾವಳಿ ಬಂತೆಂದರೆ ನಾಡಿನೆಲ್ಲೆಡೆ ಸಡಗರ ಸಂಭ್ರಮ , ಮಣ್ಣಿನ ದೀಪಗಳ ಸಾಲು ಸಾಲು ಹಚ್ಚಿ ಸಂಭ್ರಮಿಸುವುದು ವಾಡಿಕೆ. ಈಗ ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಾಗಿದೆ. ಅದೇ ರೀತಿ ಪರಿಸರ ಸ್ನೇಹಿಯಾದಂತಹ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಬೆಳಕು ಹರಡಲು ದೀಪಗಳು ಬೇಕೇ ಬೇಕು. ಇತ್ತೀಚೆಗೆ ಮಣ್ಣಿನ ಅದರಲ್ಲೂ ಜೇಡಿ ಮಣ್ಣಿನ ದೀಪಗಳು ದುಬಾರಿ ಎನಿಸಿದರೂ ಅದು ಪರಿಸರ ಸ್ನೇಹಿ ಉತ್ಪಾದನೆ ಆದ್ದರಿಂದ ಅದನ್ನೇ ಬಳಸುವವರೂ ಸಂಖ್ಯೆಯೂ ಹೆಚ್ಚಾಗೇ ಇದೆ.
ನಗರದ ಫ್ರೆಜರ್ ಟೌನ್ ಬಳಿ ಇರುವ ಪಾಟರಿ ಟೌನ್ ಬಳಿ ಶುದ್ಧ ಜೇಡಿ ಮಣ್ಣಿನಿಂದಲೇ ದೀಪಗಳ ತಯಾರಿಸಿ ತಲ ತಲಾಂತರಗಳಿಂದಲೂ ಇದನ್ನೇ ವೃತ್ತಿ ಜೀವನವನ್ನಾಗಿಸಿ ಬದಕುತ್ತಿರುವವರು ಗಲ್ಲಿಗಲ್ಲಿ ಗಳಲ್ಲೂ ಸಿಗುತ್ತಾರೆ. ಇವರು ತಯಾರಿಸುವ ವಸ್ತುಗಳು ಬೆಂಗಳೂರಿನ ಬಹುತೇಕ ನಗರದ ಎಲ್ಲಾ ಭಾಗಗಳಿಗೂ ಇಲ್ಲಿಂದಲೇ ರವಾನೆಯಾಗುತ್ತವೆ.
ಈ ಜೇಡಿ ಮಣ್ಣು ಈಗ ಕರ್ನಾಟಕದಲ್ಲಿ ಸಾಕಷ್ಟು ದೊರಕದ ಕಾರಣ ಈಗ ನೆರೆಯ ಆಂಧ್ರ ತಮಿಳುನಾಡು ಇನ್ನಿತರ ಕಡೆಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ.
ಜೇಡಿ ಮಣ್ಣಿನಿಂದ ತಯಾರಿಸುವ ವಸ್ತುಗಳಿಂದಲೇ ತಮ್ಮ ಜೀವನ ಕಟ್ಟಿಕೊಂಡಿರುವ ಇವರಿಗೆ ಕಳೆದ ಕೆಲವು ವರ್ಷಗಳ ಹಿಂದೆ ಇವರನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಕೆಲಸವೂ ನಡೆದಿತ್ತು. ಆದರೆ, ಕಳೆದ ಸರಕಾರ ಅದಕ್ಕೆ ಅವಕಾಶ ಕೊಡದೆ ಇರುವುದರಿಂದ ನಮ್ಮ ವೃತ್ತಿ ಇನ್ನೂ ಇಲ್ಲೇ ಮುಂದುವರೆಸಿದ್ದೇವೆ ಎಂದು ತಯಾರಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.