ಸುಮಾರು 3 ಗಂಟೆಗಳ ಕಾಲ ಬೆಂಗಳೂರಿನ ಅಭಿವೃದ್ಧಿ ಕುರಿತು ಎಲ್ಲಾ ಪಕ್ಷದ ಶಾಸಕರು, ಸಂಸದರು ಹಾಗೂ ಪರಿಷತ್ ಸದಸ್ಯರ ಸಭೆ ನಡೆಸಿದ್ದೇನೆ. ಕೆಲ ಸದಸ್ಯರು ಸಭೆಯಿಂದ ವಾಪಸ್ಸಾಗಿದ್ದು ಯಾಕೆ ವಾಪಸ್ಸಾಗಿದ್ದಾರೆ ಎಂದು ಗೊತ್ತಿಲ್ಲ.
ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜನ ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆ ಉಳಿಸಿಕೊಳ್ಳಲು ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ. ರಾಜಕಾರಣ ಮಾಡುವವರು ಮಾಡಬಹುದು.
ಬೆಂಗಳೂರು ಅಂತಾರಾಷ್ಟ್ರೀಯ ನಗರ. ನಮ್ಮ ಹಿರಿಯರು ಈ ನಗರದ ಘನತೆ ಹೆಚ್ಚಿಸಿದ್ದಾರೆ. ನಾವು ಈ ಘನತೆಯನ್ನು ಮರುಸ್ಥಾಪಿಸಬೇಕು.
ಬಿಜೆಪಿಯ ನಾಯಕರೇ ಈ ಹಿಂದಿನ ಸರ್ಕಾರದ ಕಾರ್ಯವೈಖರಿ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ.
ಸರ್ಕಾರಿ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಅನೇಕ ನಾಯಕರು ಅಭಿಪ್ರಾಯಪಟ್ಟಿದ್ದು, ಈ ವಿಚಾರವಾಗಿ ತಮ್ಮ ಸಲಹೆ ನೀಡಿದ್ದಾರೆ.
ಬೆಂಗಳೂರಿಗೆ ವಿಶ್ವಮಟ್ಟದ ಮನ್ನಣೆ ಮತ್ತೆ ಸಿಗಬೇಕು. ಬೆಟರ್ ಬೆಂಗಳೂರು, ಬ್ರ್ಯಾಂಡ್ ಬೆಂಗಳೂರು ಹಾಗೂ ಗ್ಲೋಬಲ್ ಬೆಂಗಳೂರು ನಿರ್ಮಾಣ ಮಾಡಬೇಕಿದೆ.
ಈ ಸಭೆಯಲ್ಲಿ ಕುಡಿಯುವ ನೀರು, ತ್ಯಾಜ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ ವಿಚಾರವಾಗಿ ಮಾಸ್ಟರ್ ಪ್ಲಾನ್ ಕೇಳಿದ್ದೇನೆ.
ರಾಜಕಾಲುವೆ ಒತ್ತುವರಿ, ಹೂಳು ಎತ್ತುವ ಕೆಲಸ ಕುರಿತು ಮಾಹಿತಿ ಹಾಗೂ ದಾಖಲೆ ಕೇಳಿದ್ದೇನೆ. ಪ್ರವಾಹ ಪರಿಸ್ಥಿತಿ ಎದುರಾದಾಗ ಕಾರ್ಯ ಯೋಜನೆ ಸಿದ್ಧಪಡಿಸುವಂತೆ ಕೇಳಿದ್ದೇನೆ.
ಈ ಹಿಂದೆ ಕೃಷ್ಣ ಅವರ ಕಾಲಯದಲ್ಲಿ ನಾರಾಯಣ ಮೂರ್ತಿ ಅವರ ನೇತೃತ್ವದಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ವಿಚಾರದಲ್ಲಿ ಸಲಹಾ ಸಮಿತಿ ಮಾಡಲಾಗಿತ್ತು. ಬೆಂಗಳೂರಿನ ಬಗ್ಗೆ ಕಾಳಜಿ ಉಳ್ಳವರ ಜತೆ ಸಭೆ ನಡೆಸಲು ನಿರ್ಧರಿಸಿದ್ದೇನೆ. ಜತೆಗೆ ಬೆಂಗಳೂರು ಅಭಿವೃದ್ಧಿ ಕುರಿತು ಸಲಹಾ ಸಮಿತಿ ರೂಪಿಸಲು ತೀರ್ಮಾನಿಸಿದ್ದೇನೆ.
ಬೆಂಗಳೂರಿನಲ್ಲಿ ನಡೆಯುವ ಪ್ರತಿ ಕಾಮಗಾರಿ ವಿಚಾರದಲ್ಲಿ ಅಧಿಕಾರಿಗಳು ಹೊಣೆಗಾರಿಕೆಯಿಂದಿರಲು, ಪ್ರತಿ ವಾರ್ಡ್ ಮಟ್ಟದಲ್ಲಿ ಎಷ್ಟು ರಸ್ತೆ ಇದೆ. ಯಾವ ಇಲಾಖೆಯಿಂದ ಯಾವ ಕೆಲಸ ಆಗುತ್ತಿದೆ ಎಂದು ವರದಿ ನೀಡಬೇಕು ಎಂದು ಸೂಚಿಸಿದ್ದೇನೆ.
ಯಾವುದೇ ಕೆಲಸ ಆರಂಭವಾಗುವ ಮುನ್ನ, ಆರಂಭವಾದ ನಂತರ ಹಾಗೂ ಕೆಲಸ ಮುಗಿದ ನಂತರ ಫೋಟೋ ಹಾಗೂ ವಿಡಿಯೋ ದಾಖಲಾತಿ ಇರಬೇಕು.
ಪಾರದರ್ಶಕತೆ ಹಾಗೂ ಹೋಣೆಗಾರಿಕೆ ತರಲು ಈ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಕೆಲಸ ಮಾಡದೇ ಬಿಲ್ ಬರೆಯುವ ಪದ್ಧತಿಗೆ ತಿಲಾಂಜಲಿ ಹಾಡಬೇಕು.
ಸಂಸದರು ಹಾಗೂ ಶಾಸಕರು ಉತ್ತಮ ಸಲಹೆ ನೀಡಿದ್ದಾರೆ. ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಡಿ.ಕೆ. ಸುರೇಶ್, ರಾಜ್ಯಸಭೆ ಸದಸ್ಯ ಜಿ.ಸಿ ಚಂದ್ರಶೇಖರ್, ಬಿಜೆಪಿ ಶಾಸಕಾರದ ರವಿಸುಬ್ರಮಣ್ಯ, ಗೋಪಾಲಯ್ಯ ಎಲ್ಲಾ ಪಕ್ಷದವರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ನೀಡಿದ್ದಾರೆ.
ನಮ್ಮ ಮಂತ್ರಿಗಳು ಕಸ ವಿಲೇವಾರಿ ಕುರಿತು ಅನೇಕ ಸಲಹೆ ನೀಡಿದ್ದಾರೆ. ಹೀಗಾಗಿ ಕಸ ತೆಗೆದುಕೊಂಡು ಹೋಗುವ ವಾಹನಗಳ ಮಾಹಿತಿ ಇರಬೇಕು. ಇದಕ್ಕಾಗಿ ವ್ಯವಸ್ಥೆ ರೂಪಿಸಲು ಪಾಲಿಕೆ, ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ.
ವಿ.ಎಸ್ ಪಾಟೀಲ್ ಅವರ ಸಲಹೆ ಬಗ್ಗೆ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ. ಈ ವರದಿ ಬಗ್ಗೆ ನಾನು ಗಮನಹರಿಸುತ್ತೇನೆ.
ಯಾವ ಕಾಲುವೆಯಲ್ಲಿ ಎಷ್ಟು ಹೂಳು ತೆಗೆದಿದ್ದಾರೆ, ಅದನ್ನು ಎಲ್ಲಿ ಹಾಕುತ್ತಿದ್ದಾರೆ ಎಂದು ಮಾಹಿತಿ ನೀಡುವಂತೆ ತಿಳಿಸಿದ್ದೇನೆ.
ಬಿಡಿಎ ಕಾಂಪ್ಲೆಕ್ಸ್ ಗಳಲ್ಲಿ ಅನೇಕ ಮಳಿಗೆ ಖಾಲಿ ಇವೆ. ಇವುಗಳನ್ನು ರೀಮಾಡೆಲಿಂಗ್ ಮಾಡಲು ಒತ್ತು ನೀಡುತ್ತೇವೆ.
ಕೆಲವು ವಾರ್ಡ್ ಗಳಿಗೆ ವಾರ, ಹದಿನೈದು ದಿನಗಳಾದರೂ ನೀರು ಪೂರೈಸುತ್ತಿಲ್ಲ. ನೀರಿನ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪುಲಕೇಶಿನಗರ ಸೇರಿದಂತೆ ಅನೇಕ ಶಾಸಕರು ತಿಳಿಸಿದ್ದಾರೆ. ಈ ವಿಚಾರವಾಗಿ ಪ್ರತಿ ಕ್ಷೇತ್ರವಾರು ಜನಸಂಖ್ಯೆ, ನಿಗದಿಯಾಗಿರುವ ನೀರಿನ ಪ್ರಮಾಣದ ಕುರಿತು ಪರಿಶೀಲನೆ ಮಾಡುತ್ತೇನೆ.
ಅನುದಾನ ವಿಚಾರದಲ್ಲಿ ರಾಜಕಾರಣ ನಡೆದಿರಬಹುದು. ಆದರೆ ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಸಲ್ಲದು.
ಬೆಂಗಳೂರಿಗೆ ಈ ಹಿಂದೆ ಇದ್ದ ಗತವೈಭವ, ಘನತೆಯನ್ನು ಮರುಸ್ಥಾಪಿಸಿ ಮಾದರಿ ನಗರವನ್ನಾಗಿ ಮಾಡಬೇಕು.
ಮಳೆ ಬಂದರೆ ಯಾವರೀತಿ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಬಾಟೆಲ್ ನೆಕ್ ಇರುವ ಸ್ಥಳಗಳಿಗೆ ನಾನು ಭೇಟಿ ನೀಡುತ್ತೇನೆ. ಮುಂಜಾಗ್ರತ ಕ್ರಮವಾಗಿ ಹೂಳು ಎತ್ತಲಾಗುತ್ತಿದೆ. ಅಂಡರ್ ಪಾಸ್ ಗಳಲ್ಲಿ ಸಿಸಿಟಿವಿ ಅಳವಡಿಸುವ ಬಗ್ಗೆ ಚರ್ಚೆ ಮಾಡಲಾಗಿದೆ.
ಅಧಿಕಾರಿಗಳ ಅಮಾನತಿಗೆ ಆದೇಶ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಹೊಸಕೆರೆ ಹಳ್ಳಿಯ ಕೆರೆಯಲ್ಲಿ ರಸ್ತೆ ನಿರ್ಮಾಣದ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿ ನೋಡಿದ್ದೆ. ಚುನಾವಣೆ ಇದ್ದ ಕಾರಣ ಆ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸಂಜೆಯೊಳಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದ್ದೇನೆ. ಅಮಾನತು ಅಧಿಕಾರಿಗಳಿಗೆ ಸಂಬಂಧಪಟ್ಟ ವಿಚಾರ’ ಎಂದು ತಿಳಿಸಿದರು.
ಬಿಬಿಎಂಪಿ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ, ‘ಸದ್ಯಕ್ಕೆ ಅದರ ಬಗ್ಗೆ ಚರ್ಚೆ ಮಾಡಿಲ್ಲ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಕೆಲವು ವಿಚಾರಗಳಿವೆ. ಕಾನೂನಾತ್ಮಕವಾಗಿ ಇರುವ ಅಡೆತಡೆಗಳನ್ನು ನಿವಾರಿಸಿಕೊಂಡು ನಂತರ ತೀರ್ಮಾನ ಮಾಡುತ್ತೇವೆ’ ಎಂದು ತಿಳಿಸಿದರು.
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಕೇಳಿದಾಗ, ‘ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅವರು ಅವರ ಕೆಲಸ ಮಾಡಲಿದ್ದಾರೆ’ ಎಂದು ತಿಳಿಸಿದರು.