ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.16: ಸಿಎಸ್ಆರ್ ಹಣದ ಮೂಲಕ ನೂತನ ಶಾಲೆಗಳನ್ನು ನಿರ್ಮಾಣ ಮಾಡಬೇಕು ಹಾಗೂ ಸದ್ಬಳಕೆ ಹೇಗೆ ಮಾಡಬೇಕು ಎಂಬುದಾಗಿ ಸರ್ಕಾರ ಯೋಜನೆ ರೂಪಿಸುತ್ತಿದೆ. ನನ್ನದೂ 3 ಶಿಕ್ಷಣ ಸಂಸ್ಥೆಗಳಿದ್ದು ಪಂಚಾಯಿತಿ ಮಟ್ಟದಲ್ಲಿ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದರು.
ಶಾಲಾ ಶಿಕ್ಷಣ ಮಾತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಸಿ ಎಸ್ ಆರ್ ಅನುದಾನ ಕುರಿತು ಬೆಂಗಳೂರಿನ ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು.
ಸಿಎಸ್ಆರ್ ಹಣವು ಕೇವಲ ನಗರೀಕರಣಕ್ಕೆ ಮಾತ್ರ ಬಳಕೆಯಾಗುತ್ತಿದೆ, ಇದನ್ನು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಬಳಕೆ ಮಾಡಬೇಕು ಎಂಬುದು ನಮ್ಮ ಆಶಯ, ಪ್ರತಿ ಪಂಚಾಯಿತಿಯಲ್ಲಿ 3 ಶಾಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಕನಸಾಗಿದೆ ಅದಕ್ಕೆ ಹಣದ ಸದ್ಬಳಕೆ ಕುರಿತು ಸಭೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.
ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವರ ಶಾಲೆಯ ಅಧ್ಯಾಪಕರನ್ನೇ ಗ್ರಾಮೀಣ ಭಾಗದ ಶಾಲೆಗಳಿಗೆ ಕಳುಹಿಸಿ ಪಾಠ ಮಾಡಬೇಕು. ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನಮ್ಮ ಕರ್ನಾಟಕದ ಪ್ರತಿ ಗ್ರಾಮೀಣ ಮಕ್ಕಳಿಗೂ ದೊರೆಯಬೇಕು. ಎಂಬುದು ನಮ್ಮ ಸರ್ಕಾರದ ಮಹತ್ವದ ಯೋಚನೆ ಮತ್ತು ಯೋಜನೆ ಎಂದು ಹೇಳಿದರು.
ಸಭೆಯಲ್ಲಿ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ, ಸಂಸದ ಡಿ ಕೆ ಸುರೇಶ್, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಬಿ ಬಿ ಕಾವೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ಬಿ ರೂಪೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.