ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.25: ‘ಬಿಜೆಪಿ ಪಕ್ಷದಂತೆ ಕಾಂಗ್ರೆಸ್ ಯಾವುದೇ ಲಿಂಗಾಯತ ನಾಯಕ ಹಾಗೂ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರಿಗೆ ರಾಜ್ಯ ರಾಜಕೀಯ ಇತಿಹಾಸದ ಬಗ್ಗೆ ಗೊತ್ತಿಲ್ಲ. ನಾನು ವಿರೇಂದ್ರ ಪಾಟೀಲ್ ಅವರ ಸರ್ಕಾರದ ಭಾಗವಾಗಿದ್ದೆ. ನಾವು ಬಿಜೆಪಿಯವರಂತೆ ಯಾವುದೇ ಮುಖ್ಯಮಂತ್ರಿಯಿಂದ ಕಣ್ಣೀರು ಹಾಕಿಸಿಲ್ಲ. ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿಯುವಾಗ ಯಾವ ಮಾತು ಆಡಿದ್ದಾರೆ. ಅದಕ್ಕೆ ಕಾರಣವೇನು? ಅವರಿಗೆ ಯಾವ ರೀತಿ ಬೆದರಿಕೆ ಹಾಕಲಾಗಿತ್ತು ಎಂಬ ವಿಷಯ ನನಗೆ ಗೊತ್ತಿದೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ. ಬಿಜೆಪಿಗೆ ಯಡಿಯೂರಪ್ಪ ಅವರ ಕಣ್ಣೀರಿನ ಶಾಸ್ತಿ ಆಗಲಿದೆ. ಜಗದೀಶ್ ಶೆಟ್ಟರ್ ಹಾಗೂ ಸವದಿ ಅವರು ಕಣ್ಣೀರು ಹಾಕದಿರಬಹುದು. ಅವರ ಮನಸ್ಸು ಅತ್ತಿದೆ’ ಎಂದು ತಿಳಿಸಿದರು. ಕಳೆದ ಮೂರು ದಿನಗಳ ಕಾಲ ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸ ಮಾಡಿದ್ದು, ಪಕ್ಷದ ಪರವಾಗಿ ಪ್ರಚಾರದ ಜತೆಗೆ ದೇವರ ಸನ್ನಿಧಿಗೂ ಭೇಟಿ ನೀಡಿದ್ದೇನೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲೂ ಸಾವಿರಾರು ಜನ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಸಾವಿರಾರು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಆ ಜಿಲ್ಲೆಯ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸೂಚನೆಗಳು ದಟ್ಟವಾಗಿವೆ. ಉಡುಪಿ ಮಂಗಳೂರು ಜಿಲ್ಲೆಯಗಳಲ್ಲಿ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಾತಾವರಣವಿದೆ. ಸಮೀಕ್ಷೆಗಳ ವರದಿಗಳು ಗ್ಯಾರಂಟಿ ಆಗಲಿವೆ ಎಂಬ ನಂಬಿಕೆ ಇದೆ ಎಂದರು. ಇಂದು ಅಮಿತ್ ಶಾ ಅವರು ಮೀಸಲಾತಿ ವಿಚಾರವಾಗಿ ಮಾತನಾಡಿದ್ದು, ನೀವು ಮುಸಲ್ಮಾನರಿಗೆ ಹೇಗೆ ಮೀಸಲಾತಿ ನೀಡುತ್ತೀರಿ ಎಂದು ಕೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಒಕ್ಕಲಿಗರಾಗಲಿ, ಲಿಂಗಾಯತರಾಗಲಿ, ಬೇರೆಯವರ ಮೀಸಲಾತಿ ಕಿತ್ತು ನಮಗೆ ಶೇ.2ರಷ್ಟು ಮೀಸಲಾತಿ ನೀಡಿ ಎಂದು ಕೇಳಿರಲಿಲ್ಲ. ಕಾಂಗ್ರೆಸ್ ಪಕ್ಷದ ಬದ್ಧತೆ ಎಂದರೆ, ಮೀಸಲಾತಿ ಮಿತಿಯನ್ನು ವಿಸ್ತರಿಸಿ ಈ ಸಮುದಾಯಗಳಿಗೆ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಎಂಬುದು ನಮ್ಮ ಒತ್ತಾಸೆ. ಮುಸಲ್ಮಾನರಿಗೂ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸಿಗಬೇಕಾದ ಮೀಸಲಾತಿ ಸಿಗಬೇಕು ಎಂದರು. ಬೇರೆ ರಾಜ್ಯಗಳಲ್ಲೂ ಮೀಸಲಾತಿ ಮಿತಿಯನ್ನು ಮೀರಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರವಾಗಿ ಸರ್ಕಾರದ ಆದೇಶ ಜಾರಿ ಕಷ್ಟ ಎಂಬುದು ಅಭಿಪ್ರಾಯ ವ್ಯಕ್ತವಾಗಿದೆ. ಸಿದ್ದರಾಮಯ್ಯ ಅವರ ಲಿಂಗಾಯತ ಸಮುದಾಯದ ವಿವಾದ ಕುರಿತು ಕೇಳಿದಾಗ, ‘ಸಿದ್ದರಾಮಯ್ಯ ಅವರು ಪ್ರಬುದ್ಧರು. ಅವರಿಗೆ ಸಾಮಾನ್ಯ ಪ್ರಜ್ಞೆ ಇದೆ. ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರು ಸಮುದಾಯದ ಬಗ್ಗೆ ಮಾತನಾಡಿಲ್ಲ. ಸರ್ಕಾರದ ವಿಚಾರವಾಗಿ ಮಾತನಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಪಕ್ಷ ಸೇರ್ಪಡೆ: ಇಂದು ದೊಡ್ಡಬಳ್ಳಾಪುರದ 8 ಹಾಲಿ ನಗರಸಭಾ ಸದಸ್ಯರು ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ನೀವು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಾ ದೇಶದ ತ್ರಿವರ್ಣ ಧ್ವಜವನ್ನು ನಿಮ್ಮ ಮೇಲೆ ಹಾಕಿಕೊಳ್ಳುವ ಪವಿತ್ರವಾದ ಅವಕಾಶ ಸಿಕ್ಕಿದೆ. ಜಗದೀಶ್ ಶೆಟ್ಟರ್, ಸವದಿ, ಪುಟ್ಟಣ್ಣ ಸೇರಿದಂತೆ ಪ್ರಮುಖ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನಿನ್ನೆ ಬೈಂದೂರಿನಲ್ಲಿ ಒಂದೂವರೆ ಸಾವಿರ ಜನ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ಇಂದು ನಿಮ್ಮನ್ನು ಬಹಳ ತುಂಬುಹೃದಯದಿಂದ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.