ಸುದ್ದಿಮೂಲ ವಾರ್ತೆ ,
ಬೆಂಗಳೂರು ಏ ೦೮: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ. ಖರ್ಗೆ ಅವರು ಏನು ಬಯಸುತ್ತಾರೋ ಅದನ್ನು ಈಡೇರಿಸುವ ಕೆಲಸ ನನ್ನದು ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ. ಆ ಮೂಲಕ ಖರ್ಗೆ ಅವರು ಮುಖ್ಯಮಂತ್ರಿಯಾದರೆ ತ್ಯಾಗಕ್ಕೂ ಸಿದ್ಧ ಎಂದು ಡಿಕೆ ಶಿವಕುಮಾರ್ ಪರೋಕ್ಷ ಸುಳಿವು ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಕೈಕೆಳಗೆ ಕೆಲಸ ಮಾಡುವುದಕ್ಕೆ ನಾನು ಇಷ್ಟಪಡುತ್ತೇನೆ. ಖರ್ಗೆ ನಮ್ಮ ಪಕ್ಷದ ಆಸ್ತಿ. ರಾಜ್ಯಕ್ಕೆ ಅವರ ಸೇವೆ ಅಗತ್ಯವಿದೆ. ಮಲ್ಲಿಕಾರ್ಜುನ ಖರ್ಗೆ ನನಗಿಂತ ರಾಜಕೀಯದಲ್ಲಿ ದೊಡ್ಡವರು ಎಂದು ಹೊಗಳಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಗಾದಿಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಆಕಾಂಕ್ಷಿಗಳು ಹೌದೆಂಬುದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ತಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಪ್ರಜಾಸತ್ತಾತ್ಮಕವಾಗಿ ಸಿಎಂ ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್ನಲ್ಲಿ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಕೊಡಿಸುವ ಯತ್ನವನ್ನೂ ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆಯೇ ಡಿಕೆಶಿ ಅವರು ಖರ್ಗೆ ಪರ ದಾಳ ಉರುಳಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಅಮುಲ್ ವಿರುದ್ಧ ಆಕ್ರೋಶ
ಅಮುಲ್ ಹಾಗೂ ಮಹಾರಾಷ್ಟ್ರ ಗಡಿ ವಿಚಾರವಾಗಿ ಕೆಲವರು ಮಾತನಾಡುತ್ತಿಲ್ಲ. ಹೋರಾಟಗಾರರು ಹಾಗೂ ಕಲಾವಿದರೆಲ್ಲರೂ ಸುಮ್ಮನೇ ಇದ್ದಾರೆ. ಗಡಿ ಭಾಗದ ನಮ್ಮ ಹಳ್ಳಿಗಳಿಗೆ ಮಹಾರಾಷ್ಟ್ರ ವಿಮೆ ಘೋಷಿಸಿದೆ. ಇತಿಹಾಸದಲ್ಲಿ ಯಾವತ್ತೂ ಈ ರೀತಿ ಆಗಿರಲಿಲ್ಲ. ಇದರ ನೈತಿಕಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.