ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.9: ನಾಗರೀಕರ ಧ್ವನಿಯೇ ನಮ್ಮ ಸರ್ಕಾರದ ಧ್ವನಿ. ಹೀಗಾಗಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಬೆಂಗಳೂರಿನ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬ್ರ್ಯಾಂಡ್ ಬೆಂಗಳೂರು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಗೆ ತಾವು ಕೈಗೊಳ್ಳಲಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಬೆಂಗಳೂರಿಗೆ ಅಂಟಿರುವ ಗ್ರಾಬೇಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕವನ್ನು ನಾವು ತೊಡೆದು ಹಾಕುತ್ತೇವೆ. ಪ್ರತಿ ರಸ್ತೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಅಲ್ಲಿನ ಕಾಮಗಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ಜನರಿಗೆ ಆ ರಸ್ತೆಯ ಕಾಮಗಾರಿ ಕುರಿತು ಜನರಿಗೆ ಮಾಹಿತಿ ನೀಡಿ ಪಾರದರ್ಶಕತೆ ನೀಡಲಾಗುವುದು.
ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ನಗರಾಭಿವದ್ಧಿ ಸಚಿವಾನಾಗಿದ್ದಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಿಎಂಐಸಿಪಿ ರಸ್ತೆ ಯೋಜನೆಗೆ ಸಹಿ ಹಾಕಿದೆ. ಜೆ.ಹೆಚ್ ಪಟೇಲರ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೋನೋ ರೈಲು ತರಲು ನಿರ್ಧರಿಸಲಾಗಿತ್ತು, ನಾನು ಹಾಗೂ ಅನಂತಕುಮಾರ್ ಅವರು ಚರ್ಚೆ ಮಾಡಿ, ಬೇರೆ ಬೇರೆ ಕಡೆ ಹೋಗಿ ಅಧ್ಯಯನ ಮಾಡಿ ನಂತರ ದೆಹಲಿ ಮಾದರಿಯಂತೆ ಮೆಟ್ರೋ ರೈಲು ಜಾರಿಗೆ ತಂದೆವು.
ಇಂದು ಕೂಡ ಬೈಯ್ಯಪನಹಳ್ಳಿಯಿಂದ ಕೆ.ಆರ್ ಪುರಂ, ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ಮೆಟ್ರೋ ಮಾರ್ಗ ಆರಂಭವಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಗಳನ್ನು ಆಹ್ವಾನಿಸಲು ಕಾಲಾವಕಾಶ ಕೇಳಿದೆವು. ಅವರು ಕಾಲಾವಕಾಶ ಕೇಳಿದ ಕಾರಣ ಇಂದು ಈ ಮಾರ್ಗಗಳ ಉದ್ಘಾಟನೆ ಮಾಡಿದ್ದಾರೆ. ನೀವು ಈ ಮಾರ್ಗಗಳಲ್ಲಿ ಪ್ರಯಾಣ ಮಾಡಬಹುದು.
70 ಸಾವಿರ ಸಲಹೆ:
ಬ್ರಾಂಡ್ ಬೆಂಗಳೂರು ಯೋಜನೆಗೆ 70 ಸಾವಿರ ಸಲಹೆ ಬಂದಿವೆ. ಪುಟಾಣಿಮಕ್ಕಳಿಂದ ಹಿರಿಯರವರೆಗೂ ಎಲ್ಲಾ ವರ್ಗದವರು ಸಲಹೆ ನೀಡಿದ್ದೀರಿ. ಈ ಬೆಂಗಳೂರು ನಮ್ಮದಲ್ಲ ಜನರದ್ದು. ನಾವು ನಮ್ಮದೇ ರೀತಿಯಲ್ಲಿ ಆಲೋಚನೆ ಮಾಡುತ್ತೇವೆ. ಅಧಿಕಾರಿಗಳು ಅವರದೇ ಆದ ರೀತಿ ಯೋಚಿಸುತ್ತಾರೆ. ಯೋಜನೆ ಆರಂಭಿಸುವ ಮುನ್ನ ನಾಗರೀಕರ ಅಭಿಪ್ರಾಯ ಮುಖ್ಯ. ಹೀಗಾಗಿ ನಾವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ.
ಈ ಯೋಜನೆ ವಿಚಾರವಾಗಿ ಪಕ್ಷಬೇಧ ಮರೆತು ಬೆಂಗಳೂರಿನ ಶಾಸಕರು, ಸಂಸದರ ಅಭಿಪ್ರಾಯ, ಹಿರಿಯ ನಾಗರಿಕರು, ಸಂಘ ಸಂಸ್ಥೆಗಳು, ಮಕ್ಕಳು ಸೇರಿದಂತೆ ಅಧಿಕಾರಿಗಳ ಸಭೆ ಮಾಡಿದ್ದೇವೆ. ಜನರ ಅಭಿಪ್ರಾಯ ಕ್ರೂಢೀಕರಿಸಿ ನಂತರ ಬೆಂಗಳೂರನ್ನು ಮುಂದಿನ ದಿನಗಳಲ್ಲಿ ಹೇಗೆ ಮುನ್ನಡೆಸಬೇಕು ಎಂದು ರೂಪುರೇಷೆ ರೂಪಿಸಲು ತೀರ್ಮಾನಿಸಿದ್ದೇವೆ.
ನಮ್ಮ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಳ್ಳಬೇಕು. ನಾವು ನಾಗರೀಕರ ಮೇಲೆ ವಿಶ್ವಾಸ ಇಟ್ಟು ಸ್ವಯಂ ಘೋಷಿತ ಆಸ್ತಿ ತೆರಿಗೆ ಕಟ್ಟಲು ಅವಕಾಶ ನೀಡಿದೆವು. ಆದರೆ ಈಗ ಕೇವಲ 3 ಸಾವಿರ ಕೋಟಿ ಮಾತ್ರ ಆಸ್ತಿ ತೆರಿಗೆ ಬರುತ್ತಿದೆ. ಇದು ನಮಗೆ ನಾಚಿಕೆ ತರುವ ವಿಚಾರ. ಈಗ ಬರುತ್ತಿರುವ ಆಸ್ತಿ ತೆರಿಗೆ ಯಾವುದಕ್ಕೂ ಸಾಲುವುದಿಲ್ಲ. ಈ ವ್ಯವಸ್ಥೆಯಲ್ಲಿ ಸಂಪನ್ಮೂಲ ಸೋರಿಕೆ ಆಗುತ್ತಿದೆ. ಇದನ್ನು ಸರಿಪಡಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಳೆನೀರು ಹರಿಯದೇ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬೆಂಗಳೂರಿನ ಬಗ್ಗೆ ಬಹಳ ಟೀಕೆ ಮಾಡಲಾಗುತ್ತಿತ್ತು. ಸಂಚಾರದಟ್ಟಣೆ ವಿಚಾರದಲ್ಲೂ ಬೇರೆ ನಗರಗಳಿಗಿಂತ ಬೆಂಗಳೂರಿನ ಮೇಲೆ ಕಳಂಕ ರೂಪಿಸಿದ್ದಾರೆ. ಬೆಂಗಳೂರು ವಿಶ್ವದ ಗಮನದಲ್ಲಿರುವ ಕಾರಣ ಇಲ್ಲಿನ ಸಮಸ್ಯೆ ಹೆಚ್ಚು ಪ್ರಚಾರ ಆಗುತ್ತಿದೆ.
ನಾನು ಅಧಿಕಾರಕ್ಕೆ ಬಂದ ನಂತರ ಮಳೆ ನೀರು ಚರಂಡಿ ವ್ಯವಸ್ಥೆ, ಕಸ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಬೇರೆ ರಾಜ್ಯಗಳಲ್ಲಿನ ಮಾದರಿಯನ್ನು ನೋಡಿದ್ದೇನೆ. ಬೆಂಗಳೂರಿನಲ್ಲಿ ಕಸ ನಿರ್ವಹಣೆಯಲ್ಲಿ ಎಲ್ಲಾ ಸರ್ಕಾರಗಳು ಎಡವಿದ್ದೇವೆ. ಎಂಟು ಕಡೆ ಕಸದಿಂದ ಇಂಧನ ಉತ್ಪಾದನೆ ಕೇಂದ್ರ ಆರಂಭಿಸಿದ್ದು ಯಾವುದೂ ಚಾಲ್ತಿಯಲ್ಲಿ ಇಲ್ಲ. ಕೇವಲ ಕಸ ತುಂಬುತ್ತಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಾಗಿದೆ. ಈ ವಿಚಾರದಲ್ಲಿ ಹೈದರಾಬಾದ್, ದೆಹಲಿ, ಚೆನ್ನೈನಲ್ಲಿ ಮಾದರಿಯನ್ನು ಗಮನಿಸಿದ್ದೇವೆ.
ಸಂಚಾರ ದಟ್ಟಣೆ ಕಡಿಮೆ ಮಾಡಲು ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಯೋಜಿತ ನಗರ ಅಲ್ಲ. ಇರುವ ನಗರವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಯೋಜನಾ ಅಯೋಗದ ಉಪಾಧ್ಯಕ್ಷ ಎಂ.ವಿ. ರಾಜೀವ್ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಸಲೀಂ, ಎಂ.ವಿ. ವೆಂಕಟೇಶ್, ದಿನೇಶ್ ಗೂಳಿಗೌಡ, ಅ. ದೇವೇಗೌಡ, ಟಿ.ಎ. ಶರವಣ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಅಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸಹಿತಿ ಹಲವರು ಉಪಸ್ಥಿತರಿದ್ದರು.