ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 18: ವಿದ್ಯಾರ್ಥಿ ದೆಸೆಯಿಂದಲೇ ಹೊರಾಟದ ಕಿಚ್ಚು ಹಚ್ಚಿಕೊಂಡಿದ್ದ ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮದಂಪತಿಯ ಪುತ್ರ ಡಿ.ಕೆ. ಶಿವಕುಮಾರ್ ಇಂದು ಕರ್ನಾಟಕ ಕಾಂಗ್ರೆಸ್ನಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.
18ನೇ ವಯಸ್ಸಿನಲ್ಲಿಯೇ ಎನ್ಎಸ್ಯುಐ (ವಿದ್ಯಾರ್ಥಿ ಕಾಂಗ್ರೆಸ್) ಸೇರ್ಪಡೆಯಾದ ಡಿ.ಕೆ. ಶಿವಕುಮಾರ್ ಆರ್.ಸಿ. ಕಾಲೇಜಿನಲ್ಲಿ ಹಲವು ಪದವಿಗಳನ್ನು ಪಡೆದು ಬಳಿಕ ತಮ್ಮ ಕನಕಪುರದಲ್ಲಿ ಹಲವು ಸಾಮಾಜಿಕ, ಸಾರ್ವಜನಿಕ ಕೆಲಸಗಳನ್ನು ಕೈಗೊಳ್ಳುತ್ತಾ ಪ್ರವರ್ಧಮಾನಕ್ಕೆ ಬಂದವರು.
1985ರರಲ್ಲಿ ಎಚ್.ಡಿ. ದೇವೇಗೌಡರ ವಿರುದ್ಧ ಸಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾವಣಗೊಂಡರೂ ಛಲಬಿಡದೆ ರಾಜಕೀಯದಲ್ಲಿ ಮುಂದುವರಿದು, 1987ರಲ್ಲಿ ಸಾತನೂರು ಜಿ.ಪಂ. ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಅವರು ಪುನಃ 1989ರಲ್ಲಿ ಅದೇ ಸಾತನೂರಿನಿಂದ ಸ್ಪರ್ಧಿಸಿ ವಿಧಾನಸಭೆಗೆ ಪ್ರಥಮ ಬಾರಿಗೆ ಪ್ರವೇಶಿಸಿದರು. 1991ರಲ್ಲಿ ಬಂಗಾರಪ್ಪ ಅವರ ಸಂಪುಟದಲ್ಲಿ ಬಂಧೀಖಾನೆ ಸಚಿವರಾಗುವ ಮೂಲಕ ಪ್ರಥಮ ಬಾರಿಗೆ ಸಂಪುಟವನ್ನೂ ಸೇರಿದ ಡಿ.ಕೆ. ಶಿವಕುಮಾರ್ 1994ರಲ್ಲಿ ಪಕ್ಷದ ಟಿಕೆಟ್ ಸಿಗದಿದ್ದರೂ ಬಂಡಾಯ ಅಭ್ಯರ್ಥಿಯಾಗಿ ಜಯಗಳಿಸಿ ತನ್ನ ಬಲಪ್ರದರ್ಶನ ಮಾಡಿದರು.
2004ರಲ್ಲಿ ಸಾತನೂರು ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಆಯ್ಕೆಯಾದ ಇವರಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ದೇವೇಗೌಡರ ವಿರೋಧಕ್ಕಾಗಿ ಸಚಿವ ಸ್ಥಾನ ಸಿಗಲಿಲ್ಲ. ಆದರೂ ಛಲ ಬಿಡದೆ 2006ರಲ್ಲಿ ದೇವೇಗೌಡರ ವಿರುದ್ಧವೇ ಕನಕಪುರ ಲೋಕಸಭೆಗೆ ತೇಜಸ್ವಿನಿ ಗೌಡ ಅವರನ್ನು ನಿಲ್ಲಿಸಿ ದೇವೇಗೌಡರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡರು.
ಎಸ್.ಎಂ. ಕೃಷ್ಣಾ ಅವರ ಕಟ್ಟಾ ಬೆಂಬಲಿಗನಾಗಿ ಗುರುತಿಸಿಕೊಂಡ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವರಾಗಿ ತಮ್ಮ ವರ್ಚಸ್ಸು ವೃದ್ಧಿಸಿಕೊಂಡು 1999ರಲ್ಲಿ ಪುನಃ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಜಯಗಳಿಸಿದರು. ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸಹ ಕಾರ್ಯ ನಿರ್ವಹಿಸಿದರು. ಹೀಗೆ ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಕಂಡ ಡಿ.ಕೆ. ಶಿವಕುಮಾರ್ 2013ರಲ್ಲಿ ಏಳನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಕೆಲ ಕಾಲ ಸಚಿವ ಸ್ಥಾನ ನೀಡಲಿಲ್ಲ. ಬಳಿಕ ಉನ್ನತ ಖಾತೆಗಳನ್ನು ಅವರಿಗೆ ವಹಿಸಲಾಯಿತು.
ಈ ಎಲ್ಲಾ ಬೆಳವಣಿಗೆ ಮಧ್ಯೆ 2018ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಬಹುಮತ ದೊರೆಯದೆ ಇದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಕುಮಾರಸ್ವಾಮಿ ಸಂಪುಟದಲ್ಲಿ ಇಂಧನ ಸಚಿವರಾಗಿ ಅಧಿಕಾರ ನಡೆಸಿದರು. ಆದರೆ, ಒಂದೂವರೆ ವರ್ಷದಲ್ಲಿಯೇ ಆ ಸರ್ಕಾರ ಪತನಗೊಂಡಿತು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲುಕಂಡ ಕಾರಣ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದಾಗ ಪಕ್ಷದ ಸಾರಥ್ಯ ವಹಿಸಿದ ಡಿ.ಕೆ. ಶಿವಕುಮಾರ್, ಕೇಂದ್ರ ಬಿಜೆಪಿ ಸರ್ಕಾರದ ಹಲವು ಕಿರುಕುಳಗಳಿಗೆ ಒಳಗಾಗಿ ಜೈಲು ಶಿಕ್ಷೆ ಅನುಭವಿಸಿದರೆ.
ಆದರೆ, ಇದು ಯಾವುದಕ್ಕೂ ಜಗ್ಗದೆ ಜಲಬಿಡದ ತ್ರಿವಿಕ್ರಮನಂತೆ 2023ರವರೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ತಮ್ಮದೇ ಆದ ಕೊಡಗೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ 8ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಡಿ.ಕೆ. ಶಿವಕುಮಾರ್ ಈಗ ರಾಜ್ಯದ ಉಪಮುಖ್ಯಮಂತ್ರಿಯಾಗುತ್ತಿದ್ದಾರೆ.